ಯುವ ಜನತೆ ಫ್ಯಾಷನ್ ಹೆಸರಿನಲ್ಲಿ ದುಶ್ಚಟಗಳಿಗೆ ಬಲಿಯಾಗಬಾರದು- ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಕಿವಿಮಾತು

ಮಾದಕ ವಸ್ತುಗಳ ಸೇವನೆಗೊಮ್ಮೆ ದಾಸರಾದರೆ, ಅದರಿಂದ ಹೊರಬರುವುದು ತುಂಬಾ ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ತಿಳಿಸಿದರು.

ಜೂನ್ 26 ಅಂತಾರಾಷ್ಟ್ರೀಯ ಮಾದಕವಸ್ತು ವ್ಯಸನ & ಅಕ್ರಮ ಕಳ್ಳಸಾಗಣೆಕೆ ವಿರೋಧಿ ದಿನದ ಅಂಗವಾಗಿ ಈ ದಿನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ‌ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರ ನೇತೃತ್ವದಲ್ಲಿ ನಗರದ ಜಾಲಪ್ಪ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದ ಅವರು,‌ ಇಂದಿನ ಯುವಜನತೆಯು ಮೋಜು, ಮಸ್ತಿ, ತಡ ರಾತ್ರಿಯ ಪಾರ್ಟಿ ಎಂದು ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ. ಇದರಿಂದ ಹದಿಹರೆಯದ ವಯಸ್ಸಿನಲ್ಲಿ ಹಾದಿ ತಪ್ಪುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹೀಗಾಗಿ ಯುವಕ- ಯುವತಿಯರಂತೂ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದು, ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನ ಬಾಹಿರ ಚಟುವಟಿಕೆಯೆಂದು ತಿಳಿದಿದ್ದರೂ ಇದರಲ್ಲಿ ತೊಡಗಿಸಿಕೊಂಡಿರುವ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಮಾದಕ ವ್ಯಸನ ಮತ್ತು ಇದರ ಕಳ್ಳ ಸಾಗಾಣಿಕೆಯಂತಹ ಚಟುವಟಿಕೆಗಳಿಂದ ಜನರನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದರು.

ತಂಬಾಕು, ಡ್ರಗ್ಸ್‌, ಗಾಂಜ, ಅಫೀಮು ಮತ್ತಿತರವು ಮಾದಕ ವಸ್ತುಗಳಾಗಿವೆ. ಇವುಗಳ ಸೇವನೆಯಿಂದ ಮೆದುಳಿನಲ್ಲಿ ಅಸ್ಪಷ್ಟತೆ ಉಂಟಾಗುತ್ತದೆ. ವ್ಯಕ್ತಿ ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಎಲ್ಲರೂ ಇದರಿಂದ ದೂರವಿರಬೇಕು ಎಂದರು.

ಮಾದಕ ವಸ್ತುಗಳ ವ್ಯಸನ ಮಾನಸಿಕ ಕಾಯಿಲೆಯಾಗಿದ್ದು, ಇದರ ವಿರುದ್ಧ ಯುವಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಯುವ ಜನತೆ ಫ್ಯಾಷನ್ ಹೆಸರಿನಲ್ಲಿ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಹೇಳಿದರು.

ಈ ವೇಳೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *