Lab to Land ಮತ್ತು Land to Lab ಕಡೆಗೆ ಕೃಷಿ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು- ಸಿಎಂ ಸಿದ್ದರಾಮಯ್ಯ

ಕೃಷಿಯಿಂದಲೇ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಕೃಷಿ ಪ್ರಗತಿ ಆದರೆ ಮಾತ್ರ ದೇಶದ ಆರ್ಥಿಕತೆ ಪ್ರಗತಿ ಹೊಂದುತ್ತದೆ. ಶೇ.70 ರಷ್ಟು ಗ್ರಾಮೀಣ ಭಾರತ ಕೃಷಿ ಮೇಲೆ ಅವಲಂಭಿತವಾಗಿದೆ. ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಭಿ, ಸ್ವಾಭಿಮಾನಿ ಆಗಲು ಕೃಷಿಕ ಸಮುದಾಯ, ರೈತ ಸಮುದಾಯ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕೃಷಿ ಅಧಿಕಾರಿಗಳು ರೈತರ ಅಭಿಪ್ರಾಯ ಪಡೆದು, ರೈತರ ಅನುಭವ ಆಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಹಕಾರ ನೀಡಬೇಕು. Lab to Land ಮತ್ತು Land to Lab ಕಡೆಗೆ ಕೃಷಿ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

ಸಾಮಾಜಿಕ ನ್ಯಾಯ, ವರ್ಗ ರಹಿತ ಸಮಾಜ ಆಗಬೇಕಾದರೆ ರೈತರಿಗೆ ಆರ್ಥಿಕವಾಗಿ ಶಕ್ತಿ ನೀಡಬೇಕು. ಇಲ್ಲದಿದ್ದರೆ ಬದಲಾವಣೆ ಸಾಧ್ಯವಿಲ್ಲ. ಸಾಮಾಜಿಕ ಬದಲಾವಣೆ ದಿಕ್ಕಿನಲ್ಲಿ ನಾವು ಗ್ಯಾರಂಟಿಗಳನ್ನು ರೂಪಿಸಿ ಜಾರಿ ಮಾಡಿದೆವು. ಇದರಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಪ್ರಧಾನಿ ಮೋದಿಯವರೂ ಸುಳ್ಳು ಹೇಳಿದ್ದರು. ಸತ್ಯ ಏನು ಎಂದು ನಾಡಿನ‌ ಜನತೆಗೆ ಮನವರಿಕೆಯಾಗಿದೆ ಎಂದು ತಿಳಿಸಿದರು.

ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಉದ್ದೇಶಕ್ಕಾಗಿ ವರ್ಷಕ್ಕೆ ನಮ್ಮ ಸರ್ಕಾರ 19,000 ಕೋಟಿ ಸಬ್ಸಿಡಿ ನೀಡುತ್ತಿದೆ. ಕೃಷಿ ನೀರಾವರಿ ಯೋಜನೆಗಳಿಗೆ ₹26,000 ಕೋಟಿ ನೀಡಿದ್ದೇವೆ. ಆರ್ಥಿಕತೆ ದಿವಾಳಿಯಾಗಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ರೈತಪರ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದರು.

ಇಂಥಾ ಹೊತ್ತಲ್ಲಿ ರೈತ ಸಾಧಕರನ್ನು ಗುರುತಿಸಿ ಕರೆದು ಸನ್ಮಾನಿಸುತ್ತಿರುವುದು ಅತ್ಯಂತ ಪ್ರೋತ್ಸಾಹದಾಯಕ. ಸಮಗ್ರ ಕೃಷಿಯನ್ನು ಮಾಡದ ಹೊರತು ಕೃಷಿ ಲಾಭದಾಯಕವಲ್ಲ ಎಂದರು.

ನಮ್ಮ ರಾಜ್ಯದಲ್ಲಿ ರಾಜಸ್ತಾನದ ನಂತರ ಅತಿ ಹೆಚ್ಚು ಒಣ ಕೃಷಿ ಭೂಮಿ ಹೆಚ್ಚು ಹೊಂದಿದೆ. ನಾವು ಜಾರಿಗೆ ತಂದಿದ್ದ ಕೃಷಿ ಭಾಗ್ಯ ಯೋಜನೆಯನ್ನು ನಮ್ಮ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿತ್ತು. ಈಗ ನಾವೇ ಅಧಿಕಾರಕ್ಕೆ ಬಂದು ಮತ್ತೆ ಜಾರಿ ಮಾಡಿದ್ದೇವೆ. ಇಲ್ಲಿಯವರೆಗೂ 24,000 ಕೃಷಿ ಹೊಂಡ ನಿರ್ಮಿಸಿ ದಾಖಲೆ ಮಾಡಲಾಗಿದೆ ಎಂದರು.

ನಾನೂ ರೈತ ಕುಟುಂಬದಿಂದ ಬಂದವನು, ಕೃಷಿ ಬದುಕು-ರೈತರ ಬದುಕು, ಗ್ರಾಮೀಣ ಬದುಕಿನ‌ ಕಷ್ಟ ನಷ್ಟಗಳು ನನಗೆ ಗೊತ್ತಿದೆ. ಹೀಗಾಗಿ ರೈತರ ಪರವಾಗಿ ಸರ್ಕಾರದ ಮುಂದೆ ಬಂದ ಎಲ್ಲಾ ಪ್ರಸ್ತಾವನೆಗಳಿಗೂ ಮಂಜೂರಾತಿ  ನೀಡುತ್ತಿದ್ದೇವೆ. ರೈತರಿಗೆ ಹೆಚ್ಚು ಒತ್ತು ಕೊಡುವ ಕೆಲಸಗಳನ್ನು ಮಾಡುತ್ತಿದ್ದೇವೆ. ಅದರಲ್ಲೂ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದು ಹೇಳಿದರು.

43% ಸಾವಯವ ಇಂಗಾಲ ಕಡಿಮೆ ಆಗುತ್ತಿರುವುದರಿಂದ ಭೂಮಿಯ ಫಲವತ್ತತೆ ಕಡಿಮೆ ಆಗಿ ರೈತರ ಉತ್ಪಾದನೆ, ಆದಾಯ ಕಡಿಮೆ ಆಗುತ್ತದೆ. ಇಂಥಾ ಹೊತ್ತಲ್ಲಿ “ಸೂಪರ್ ಸ್ಟಾರ್ ರೈತ” ಪುರಸ್ಕಾರಕ್ಕೆ ಒಳಗಾಗಿರುವವರು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು, ಇವರನ್ನು ವಿಜಯ ಕರ್ನಾಟಕ ಗುರುತಿಸಿರುವುದು ಒಳ್ಳೆಯದು. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಜಾರಿಗೆ ತಂದ “ನರೇಗಾ” ಕೃಷಿಗೆ ಬಹಳ ದೊಡ್ಡ ಅನುಕೂಲ ಕಲ್ಪಿಸಿದೆ ಎಂದರು.

Leave a Reply

Your email address will not be published. Required fields are marked *