ತೀವ್ರ ಕುತೂಹಲ ಕೆರಳಿಸಿರುವ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದಿದ್ದು, ಬಮೂಲ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ.ಕೆ ಸುರೇಶ್ ಇಂದು ಬಮೂಲ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ನಾಮಪತ್ರ ಸಲ್ಲಿಸಿದ್ದರು. ಬೆಂಗಳೂರಿನ ಡೇರಿ ಸರ್ಕಲ್‌ನಲ್ಲಿರುವ ಬಮೂಲ್ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆಯನ್ನು ದಾಖಲಿಸಿದ್ದರು. ಇದೀಗ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಕ್ರಮ ಡಿಕೆ ಸಹೋದರರ ರಾಜಕೀಯ ತಂತ್ರಗಾರಿಕೆಯನ್ನು ಮತ್ತಷ್ಟು ಬಲಗೊಳಿಸಿದ್ದು, ಕೆಎಂಎಫ್‌ನಂತಹ ಪ್ರತಿಷ್ಠಿತ ಸಂಸ್ಥೆಯ ನಿಯಂತ್ರಣಕ್ಕೆ ಸ್ಪಷ್ಟ ದಾಪುಗಾಲಿಡುವಂತಿದೆ.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಮೂಲ್ ಸಂಸ್ಥೆಗೆ ಸುಮಾರು 65 ವರ್ಷಗಳ ಇತಿಹಾಸವಿದೆ. ಈ ಸಹಕಾರ ಸಂಸ್ಥೆಯನ್ನು ಉಳಿಸಿ ಬೆಳೆಸಬೇಕು. ಏನಾದರು ಹೊಸ ಬದಲಾವಣೆ ತರಲೆಂದು ರೈತರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರ ಆಶಯದಂತೆ ರೈತರಿಗೆ ಅನುಕೂಲವಾಗುವ ಹೊಸ ಬದಲಾವಣೆ ತರಲು ಪ್ರಯತ್ನ ಪಡುತ್ತೇವೆ ಎಂದರು.
ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ನ್ನು ಕರ್ನಾಟಕ ಎಲ್ಲಾ ಭಾಗಗಳಿಗೂ ವಿಸ್ತರಣೆ ಮಾಡಬೇಕು ಎಂಬ ಚಿಂತನೆಯಲ್ಲಿದ್ದೇವೆ. ರೈತರ ಬದುಕು ಹಾಲಿನಲ್ಲಿದೆ. ಅವರಿಗೆ ನ್ಯಾಯ ಕೊಡಲು ನಾವು ಪ್ರಯತ್ನಿಸುತ್ತೇವೆ ಎಂದರು.