ಪ್ರೇಯಸಿ ಕೈಕೊಟ್ಲು ಅಂತಾ ಬೇಸತ್ತು ಕಣ್ಣೀರು ಹಾಕುತ್ತಾ ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ: ಎಣ್ಣೆಯಲ್ಲಿ ವಿಷದ ಮಾತ್ರೆ ಸೇವಿಸಿ ಸೂಸೈಡ್: ವಿಷ ನೆತ್ತಿಗೆ ಏರುತ್ತಿದ್ದಂತೆ ಜೀವ ಉಳಿಸುವಂತೆ ಅಂಗಲಾಚಿದ ಯುವಕ

ಅವರಿಬ್ಬರೂ ಕಳೆದ ಐದು ವರ್ಷಗಳಿಂದ ಒಬ್ಬರನ್ನು ಒಬ್ಬರು ಬಿಟ್ಟಿರದೆ ಪ್ರೀತಿ ಮಾಡ್ತಿದ್ರು, ಇವರಿಬ್ಬರ ಪ್ರೀತಿ ಮೇಲೆ ಅದು ಯಾರೋ ಕಣ್ಣೋ ಬಿತ್ತೋ ಗೊತ್ತಿಲ್ಲ ಕಳೆದ ಒಂದು ವರ್ಷದಿಂದ ಪ್ರೇಮಿಗಳ ನಡುವೆ ಜಗಳವೋ ಜಗಳ. ಪ್ರೇಯಸಿಯ ನಡೆಗೆ ಬೇಸತ್ತ ಹುಡುಗ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅತ್ತ ಹುಡುಗ ಬಾರದ ಲೋಕಕ್ಕೆ ಪಯಣ ಬೆಳಸಿದ್ದಾನೆ.

ಮೊಬೈಲ್ ಹಿಡಿದುಕೊಂಡು ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಕೆರೆಯ ಸಮೀಪದಲ್ಲಿ ಸುಮಾರು 6-7 ನಿಮಿಷ ಸೆಲ್ಫಿ ವಿಡಿಯೋ ಮಾಡಿಕೊಂಡು ಗಳ ಗಳನೆ ಅಳುತ್ತಿರು ಹುಡುಗನ ಹೆಸರು ಮಂಜುನಾಥ‌. ಬೆಂಗಳೂರಿನ ಸೀಗೇಹಳ್ಳಿ ನಿವಾಸಿ. ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡು 5 ವರ್ಷಗಳಿಂದ ಬೆಂಗಳೂರಿನ ಚಳ್ಳೆಘಟ್ಟ ನಿವಾಸಿ ಯುವತಿ ಜೊತೆ ಪ್ರೀತಿಯಾಗಿತ್ತು. ಇಬ್ಬರು ಒಬ್ಬರನ್ನೊಬ್ಬರು ಬಿಟ್ಟು ಕೊಡದೆ ಪ್ರೀತಿಯಲ್ಲಿ ಮುಳುಗಿ ಸಾಕಷ್ಟು ಕಡೆ ಸುತ್ತಾಡಿದ್ದರು. ಆದ್ರೆ ಇವರಿಬ್ಬರ ಪ್ರೀತಿಯ ನಡುವೆ ಮತ್ತೊಬ್ಬ ಇರುವುದು ಮಂಜುನಾಥನಿಗೆ ತಿಳಿದಿದೆ.‌ ಇದೇ ವಿಚಾರಕ್ಕೆ ಮೊದಲು ಗಲಾಟೆ ಪ್ರಾರಂಭವಾಗಿದೆ.‌ ಪ್ರೀತಿಯಲ್ಲಿ ನಮಗೆ ಎಲ್ಲೋ ಮೋಸವಾಗಿದೆ ಎಂದು ಬೇಸತ್ತು ಈಗ ಪ್ರೀತಿ ಮಾಡಿದ ಹುಡುಗನೆ ಕಾಳು ಮಾತ್ರೆ ಸೇವಿಸಿ ಸೂಸೈಡ್ ಮಾಡಿಕೊಂಡಿದ್ದಾನೆ…

ಮೃತ ಮಂಜುನಾಥ‌ ಹಾಗೂ ಆತನ ಪ್ರೇಯಸಿ ನಡುವೆ 1 ವರ್ಷದಿಂದ ಜಗಳ ನಡೆಯುತ್ತಿತ್ತು. ಜಗಳ ವಿಕೋಪಕ್ಕೆ ಹೋದಾಗ ಮಂಜುನಾಥ ತಲೆ ಕೆಡಿಸಿಕೊಂಡು ಬೆಂಗಳೂರುನಿಂದ ಆಟೋದಲ್ಲಿ ದೊಡ್ಡಬಳ್ಳಾಪುರದ ರಾಜಘಟ್ಟ ಕೆರೆಗೆ ಬಂದು ಸೆಲ್ಫಿ ವಿಡಿಯೋ ಮಾಡಿ 5 ವರ್ಷಗಳಿಂದ ನಾನು ಗಗನ ಪ್ರೀತಿ ಮಾಡ್ತಿದ್ವಿ. ಆದ್ರೆ ಅವಳು ಹಣಕ್ಕಾಗಿ ಬೇರೆಯವನ ಜೊತೆ ಸಂಬಂಧ ಇಟ್ಟುಕೊಂಡು ಗರ್ಭಿಣಿ ಕೂಡ ಹಾಗಿದ್ಲು. ಇದನ್ನು ವಿರೋಧಿಸಿದ್ದಕ್ಕೆ ನನ್ನನ್ನು ಜೈಲಿಗೆ ಕೂಡ ಕಳಿಸಿದ್ಲು. ಜೈಲಿನಿಂದ ಹೊರಬರುವ ವೇಳೆಗೆ ಆಕೆ ಗರ್ಭಪಾತ‌ ಆಗಿದೆ ಎಂದು ಹೇಳಿದಳು. ಆದರೂ ಕೂಡ ನಾನೆ ಮದ್ವೆ ಆಗಲು ಒಪ್ಪಿದ್ದೆ.  ಆದ್ರೆ ಅವಳಿಗೆ ನನ್ನ ಪ್ರೀತಿ ಬಿಟ್ಟು ಹಣಕ್ಕೆ ಬೇಡಿಕೆ ಇಟ್ಟು ಚಿತ್ರ ಹಿಂಸೆ ಕೊಡ್ತಿದ್ಲು ಎಂದು ವಿಡಿಯೋದಲ್ಲಿ ಆರೋಪಿಸಿ. ಇದ್ರಿಂದ ಬೇಸತ್ತು ನಾನು ಸತ್ತು ಹೋಗುತ್ತಿದ್ದೇನೆ ನನಗೆ ನ್ಯಾಯ ಕೊಡಿಸಿ ಎಂದು ಎಣ್ಣೆ ಜೊತೆ ಕಾಳು ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಂತರ ವಿಷ ನೆತ್ತಿಗೆ ಏರುತ್ತಿದ್ದಂತೆ ದೇವಾಲಯದ ಬಳಿ ಜೀವ ಉಳಿಸುವಂತೆ ಬೇಡಿಕೊಂಡಿದ್ದಾನೆ. ಪಕ್ಕದಲ್ಲೇ ಇದ್ದ ಸ್ಥಳೀಯರು ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿ ಆಗದೆ ಯುವಕ‌ ಸಾವನಪ್ಪಿದ್ದಾನೆ.

ಯುವಕ ಈ ಕತೆ ಹೇಳಿದ್ರೆ ಅಲ್ಲಿ ಪ್ರಿಯತಮೆ ಬೇರೆ ಕತೆ ಕಟ್ಟಿದ್ದಾಳೆ. ನಾನು ಮಂಜುನಾಥ ಪರಸ್ಪರ ಒಪ್ಪಿಗೆಯಿಂದ 4 ತಿಂಗಳ ಹಿಂದೆ ದೈಹಿಕ ಸಂಬಂಧ ಹೊಂದಿದ್ದೆವು. ಇಂದ್ರಿಂದಾಗಿ ನಾನು 3 ತಿಂಗಳ ಗರ್ಭಿಣಿ ಆಗಿದ್ದೇನೆ. ಇದನ್ನು ತಿಳಿದ ಮಂಜುನಾಥ್ ನನಗೆ ಗರ್ಭಪಾತ ಮಾಡಿಸು ಇಲ್ಲ ಅಂದ್ರೆ ನಾನು ಮದುವೆ ಹಾಗಲ್ಲ ಅಂತ ಹೇಳಿದ್ದ. ಇದಕ್ಕೆ ನಾನು ಒಪ್ಪದೇ ಇದ್ದಾಗ ನನಗೆ ಜೀವ ಬೆದರಿಕೆ ಹಾಕಿದ್ದಾನೆ  ಎಂದು 28_06_2024 ರಂದು ಕುಂಬಳಗೋಡು ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರಿನ‌ ಕಾರಣ ಮಂಜುನಾಥ್ ನನ್ನು ಕೆಲತಿಂಗಳ ಕಾಲ ಜೈಲಿಗೆ ಹಾಕಲಾಗಿತ್ತು. ನಂತರ ಬೇಲ್ ಮೂಲಕ ಹೊರಬಂದು ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಘಟನೆ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುವತಿ ಸೇರಿ ಮೂರು ಜನರ ಮೇಲೆ ದೂರು ದಾಖಲಾಗಿದೆ.

ಒಟ್ಟಾರೆ ಪ್ರೀತಿ-ಪ್ರೇಮ ಅಂತಾ ಅಲೆದು‌ ಈಗ ಆತ್ಮಹತ್ಯೆ ಮಾಡಿಕೊಂಡು ಒಂದು ಜೀವ ಹೋಗಿದೆ. ಇವರಿಬ್ಬರ ಪ್ರೀತಿಯ ತೆವಲಿಗೆ ಕಣ್ಣೀರು ಸುರಿಸಿದ್ದು ಮಾತ್ರ ಪೋಷಕರು. ಇನ್ನು ಮುಂದೆ ಪ್ರೀತಿ ಮಾಡುವ ಮುನ್ನ ಒಂದು ಬಾರಿ ಕುಟುಂಬದ ಬಗ್ಗೆ ಅರಿವಿರಲಿ ಎಂದು ಹೇಳುವುದೇ ನಮ್ಮ ಆಶಯ.

Leave a Reply

Your email address will not be published. Required fields are marked *