ಲೈಂಗಿಕ ದೌರ್ಜನ್ಯಕ್ಕೊಳಗಾದ, ದಲಿತ, ಸಂತ್ರಸ್ತ, ನಿರಾಶ್ರಿತ ಮಹಿಳೆ ವಾಸವಿದ್ದ ಗುಡಿಸಲು ನೆಲಸಮ: ಆಶ್ರಯ, ರಕ್ಷಣೆ ನೀಡಬೇಕಾದವರಿಂದಲೇ ಬೀದಿಪಾಲಾದ ನಿರಾಶ್ರಿತ ಬಡ ಕುಟುಂಬ: ನ್ಯಾಯಕ್ಕಾಗಿ ಕಚೇರಿಗಳ ಅಲೆದಾಟ

ಆ ಊರು ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಿಂದ ಸುಮಾರು 35 ಕಿಮೀ ದೂರವಿದೆ. ಅಲ್ಲಿ ಏನು ನಡೆದರೂ ಯಾರಿಗೂ ಗೊತ್ತಾಗುವುದಿಲ್ಲ. ಅಲ್ಲಿನ ದಲಿತರ ಪಾಡು ಕೇಳೋರಿಲ್ಲ, ಹೇಳೋರಿಲ್ಲ. ಮೇಲ್ಜಾತಿಯವರ ದಬ್ಬಾಳಿಕೆಗೆ ದಲಿತ ಕುಟುಂಬಗಳು ನಲುಗುತ್ತಿವೆ. ಇತ್ತೀಚೆಗೆ ಪ್ರಬಲ ಜಾತಿಯ ಕಾಮುಕನ ಕಾಮದ ತೀಟೆಗೆ ದಲಿತ ಮಹಿಳೆ ನಲುಗಿಹೋಗಿ ಚೇತರಿಸಿಕೊಳ್ಳುವಷ್ಟರಲ್ಲಿ ಆಕೆಗೆ ಮತ್ತೊಂದು ಶಾಕ್ ಬಂದೊದಗಿದೆ…..! ಅದು ಏನು ಅಂತೀರಾ….? ಮಾಹಿತಿ ಇಲ್ಲಿದೆ ಓದಿ….

ಯೆಸ್… “ಸ್ವಾಮಿ ನಮ್ಮನ್ನು ಬೀದಿಪಾಲು ಮಾಡಿದ್ದಾರೆ. ನಮಗೆ ನ್ಯಾಯ ಒದಗಿಸಿಕೊಡಿ ಎಂದು ಡಿಸಿ ಕಚೇರಿ, ತಾಲೂಕು ಕಚೇರಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹೀಗೆ ವಿವಿಧ ಕಚೇರಿಗಳಿಗೆ ಮನವಿ ಪತ್ರ ಹಿಡಿದುಕೊಂಡು ಲೈಂಗಿಕ ದೌರ್ಜನ್ಯಕ್ಕೊಳಗಾದ, ದಲಿತ, ಸಂತ್ರಸ್ತ, ನಿರಾಶ್ರಿತ ಮಹಿಳೆ‌ ಹಾಗೂ ಆಕೆಯ ಗಂಡ, ಮಕ್ಕಳು ಅಲೆದಾಡುತ್ತಿದ್ದಾರೆ”….

ಮತ್ತೊಂದು ಕಡೆ ಬಟ್ಟೆ-ಬರೆ, ಗ್ಯಾಸ್ -ಸಿಲಿಂಡರ್, ಪಾತ್ರೆ ಸಾಮಾನು, ಅಡುಗೆ ಪರಿಕರ, ಅಕ್ಕಿ, ರಾಗಿ, ಸೇರಿದಂತೆ ಗುಡಿಸಲಿನಲ್ಲಿದ್ದ ಎಲ್ಲಾ ಸಾಮಗ್ರಿಗಳು ದಿಕ್ಕು ದೆಸೆ ಇಲ್ಲದೇ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿರುವ ದೃಶ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ಸಾಸಲು ಹೋಬಳಿ, ಆರೂಢಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನವತಿ ಗ್ರಾಮದಲ್ಲಿ ಕಂಡುಬಂದಿದೆ.

 

ಸಾಸಲು ಹೋಬಳಿಯ ಆರೂಢಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬನವತಿ ಗ್ರಾಮಕ್ಕೆ ಸೇರಿದ ಖಾನೇಷುಮಾರಿ ಗ್ರಾಮ ಠಾಣಾ ಜಾಗದಲ್ಲಿ ಸುಮಾರು ಹತ್ತು ವರ್ಷಗಳಿಂದ ದಲಿತ ಮಹಿಳೆ ಗುಡಿಸಲನ್ನು ಕಟ್ಟಿಕೊಂಡು ಗಂಡ, ಮಕ್ಕಳೊಂದಿಗೆ ವಾಸ ಮಾಡುತ್ತಿದ್ದರು. ಇದೀಗ ಆರೂಢಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಈ ಗುಡಿಸಲನ್ನು ತೆರವುಗೊಳಿಸಿ “ಎಚ್ಚರಿಕೆ, ಈ ಸ್ವತ್ತು ಗ್ರಾಮ ಪಂಚಾಯಿತಿ ಸ್ವತ್ತಾಗಿದ್ದು, ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ…. ಪ್ರಕಟಣೆ ಆರೂಢಿ ಗ್ರಾಮ ಪಂಚಾಯಿತಿ” ಎಂಬ ಬರಹದ ಫಲಕವನ್ನು ನೆಟ್ಟು ಹೋಗಿದ್ದಾರೆ…… ಇದರಿಂದ ಈ‌ ಬಡ ಕುಟುಂಬ‌ ಸೂರು‌‌ ಇಲ್ಲದೇ ಮಳೆ, ಗಾಳಿ, ಚಳಿ, ಬಿಸಿಲಿಗೆ ನಲುಗುತ್ತಿದೆ.

ಈ ವಿಚಾರ ತಿಳಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ‌ ರಾಜ್ಯ ಸಂಘಟನ ಸಂಚಾಲಕ ನೆಲಮಂಗಲ ಬಸವರಾಜು, ಜಿಲ್ಲಾ ಸಂಚಾಲಕ ರಾಮಮೂರ್ತಿ(ರಾಮು‌ ನೇರಳೇಘಟ್ಟ) ನಿರಾಶ್ರಿತ ಬಡ ಕುಟುಂಬದ ನೆರವಿಗೆ ಧಾವಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲಿತ ಹೆಣ್ಣುಮಗಳು ಪ್ರಬಲ ಜಾತಿ ಯುವಕನ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಬಹಳ ನೊಂದಿದ್ದಾಳೆ, ಈ ಘಟನೆಯಿಂದ ಆಕೆಯ ಸಂಬಂಧಿಕರು ಯಾರು ಮನೆಯೊಳಗೆ ಸೇರಿಸುತ್ತಿಲ್ಲ. ಮನೆಯಿಂದ ಹೊರಹಾಕಿದ್ದಾರೆ. ಈ ಹಿನ್ನೆಲೆ ಗ್ರಾಮಠಾಣಾ ವ್ಯಾಪ್ತಿಯ‌ ಖಾಲಿ ಜಾಗದಲ್ಲಿ ಸಣ್ಣ ಗುಡಿಸಲು ಕಟ್ಟಿಕೊಂಡು ತನ್ನ ಗಂಡ, ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಾರೆ. ಇದನ್ನು ಸಹಿಸದ ಕೆಲ ಬಲಾಡ್ಯರು ಅಧಿಕಾರಿಗಳ ಮೂಲಕ ಊರಿನಿಂದಲೇ ಹೊರಹಾಕಲು ಹುನ್ನಾರ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂತ್ರಸ್ತೆಗೆ ಆಶ್ರಯ, ರಕ್ಷಣೆ ನೀಡಬೇಕಾದ ಅಧಿಕಾರಿಗಳೇ ಯಾವ ನೋಟಿಸ್ ನೀಡದೇ ಆಕೆ ವಾಸ ಮಾಡುತ್ತಿರುವ ಗುಡಿಸಲು ನೆಲಸಮ‌ ಮಾಡಿ ಬೀದಿಗೆ ದಬ್ಬಿದ್ದಾರೆ. ಇದು ಖಂಡನೀಯ, ಇದಕ್ಕೆ ನೇರ ಹೊಣೆ ಪಿಡಿಒ, ಕೂಡಲೇ ಸಂತ್ರಸ್ತೆಗೆ ಆಶ್ರಯ, ರಕ್ಷಣೆ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು…

ನಂತರ ಸಂತ್ರಸ್ತೆ ಗಂಡ ರವಿಕುಮಾರ್ ಮಾತನಾಡಿ, ನಾವು ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ನಮಗೆ ಒಂದು‌ ಇಂಚೂ ಎಲ್ಲೂ ಜಾಗವಿಲ್ಲ. ಆದ್ದರಿಂದ ನಾವು ಗ್ರಾಮ ಠಾಣಾ ವ್ಯಾಪ್ತಿಯ‌ ಖಾಲಿ ಜಾಗದಲ್ಲಿ ಸಣ್ಣ ಗುಡಿಸಲು ನಿರ್ಮಾಣ ಮಾಡಿಕೊಂಡು ವಾಸವಿದ್ದೆವು. ಈಗ ಏಕಾಏಕಿ ಬಂದು ನಮ್ಮನ್ನು ಗುಡಿಸಲಿನಿಂದ ಹೊರ ದಬ್ಬಿ, ಮನೆಯಲ್ಲಿದ್ದ ವಸ್ತುಗಳನ್ನು ಹೊರಹಾಕಿ ಗುಡಿಸಲನ್ನು ನೆಲಸಮ ಮಾಡಿದ್ದಾರೆ. ನಮಗೆ ಬಹಳ ಅನ್ಯಾಯ ಆಗಿದೆ.. ನಮಗೆ ಆಶ್ರಯ, ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು….

ಸಂತ್ರಸ್ತೆ ಹಾಗೂ ನಿರಾಶ್ರಿತ ಮಹಿಳೆಯ ಮನವಿಯನ್ನು ಸ್ವೀಕರಿಸಿದ ಅಧಿಕಾರಿಗಳು, ಕೂಡಲೇ ಸ್ಥಳ ಪರಿಶೀಲನೆ ಮಾಡಿ, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕ ತರಲಾಗುವುದು. ಪರಿಹಾರ ಒದಗಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದ್ದಾರೆ….

Leave a Reply

Your email address will not be published. Required fields are marked *