ಜೂ.7ರಂದು ಬಕ್ರೀದ್ ಹಬ್ಬವನ್ನು ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸಲು ಮುಸ್ಲಿಂ ಬಾಂಧವರು ಸಕಲ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರಲು ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.
ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಬ್ಬ ಆಚರಣೆ ವೇಳೆ ಕೆಲವು ಕಾನೂನಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಕುರಿತು ಹಿಂದೂ ಮುಸ್ಲಿಂ ಮುಖಂಡರಿಗೆ ಸಲಹೆ ಸೂಚನೆಗಳನ್ನು ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಮಟ್ಟದ ಶಾಂತಿ ಸಭೆಯನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬಕ್ರೀದ್ ಹಬ್ಬದ ಸಮಯದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ಹಾಗೂ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಹಬ್ಬವನ್ನು ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರಚೋನಕಾರಿ ವಿಡಿಯೋ, ಆಡಿಯೋ ಮತ್ತು ವಾಟ್ಸಾಪ್ ಯೂನಿವರ್ಸಿಟಿಯ ಸಂದೇಶಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಅದರಿಂದ ಪ್ರಚೋದನೆಗೆ ಒಳಗಾಗಬೇಡಿ. ಅದನ್ನು ನೋಡಿಕೊಳ್ಳಲು ಪೊಲೀಸ್ ಇಲಾಖೆ ಇದೆ. ನೀವು ಶಾಂತಿ ಸೌಹಾರ್ದತೆಯಿಂದ, ಪರಸ್ಪರ ಪ್ರೀತಿ ವಿಶ್ವಾಸದಿಂದ ದೇವರ ಧ್ಯಾನ ಮಾಡಿ. ಅಶಕ್ತರಿಗೆ ನಿಮ್ಮ ಕೈಲಾದಷ್ಟು ಧಾನ ನೀಡಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿ ಎಂದು ಕರೆಕೊಟ್ಟರು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಸಾಮೂಹಿಕ ಪ್ರಾರ್ಥನೆ, ಅತಿಥಿ ಸತ್ಕಾರದ ಇಫ್ತಿಯಾರ್ ಕೂಟ ಸೇರಿದಂತೆ ಧಾರ್ಮಿಕ ವಿವಿಧ ಸೇವಾ ಚಟುವಟಿಕೆಯ ಮೂಲಕ ಭಗವಂತನನ್ನು ಪ್ರಾರ್ಥಿಸಲಾಗುತ್ತದೆ. ಹಬ್ಬದ ವೇಳೆ ಯಾವುದೇ ಅವಘಡಗಳಿಗೆ ಅವಕಾಶ ನೀಡದೇ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಬ್ಬ ಆಚರಿಸಬೇಕು ಎಂದರು.
ಇಸ್ಲಾಂ ಧರ್ಮದ ಪದ್ಧತಿಯಂತೆ ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ಅಹಿತಕರ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಯಾವುದೇ ಧರ್ಮದ ಹಬ್ಬ ಹರಿದಿನವಾಗಲಿ, ಮತ್ತೊಂದು ಧರ್ಮದವರಿಗೆ ತೊಡಕು ಉಂಟಾಗದ ರೀತಿಯಲ್ಲಿ ಆಚರಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಯಿತು.
ಹಿಂದೂ-ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ ಶಾಂತಿಯಿಂದ ಹಬ್ಬವನ್ನು ಆಚರಿಸಬೇಕು. ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಹಿಂದಿನಿಂದಲೂ ಎಲ್ಲಾ ಮಸೀದಿಗಳಲ್ಲಿ ಶಾಂತಿ, ಸೌಹಾರ್ದತೆಯಿಂದ ಹಬ್ಬಗಳು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲೂ ಕೂಡಾ ಇದೇ ಸಂಸ್ಕೃತಿ ಮುಂದುವರೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಈ ವೇಳೆ ವಿವಿಧ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್ ಗಳು, ತಹಶೀಲ್ದಾರ್ ವಿದ್ಯಾವಿಭಾ ರಾಠೋಡ್, ನಗರಸಭೆ ಪೌರಾಯುಕ್ತ ಕಾರ್ತೀಕೇಶ್ವರ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.