2023ರ ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೇ 10 ರಂದು ಮತದಾನ ಹಾಗೂ ಮೇ 13 ರಂದು ಮತ ಎಣಿಕೆ ನಡೆಯಲಿರುವ ಹಿನ್ನೆಲೆ, ಮುಕ್ತ, ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲೆಯಾದ್ಯಂತ ಮದ್ಯ ಸಾಗಾಣಿಕೆ, ವಿತರಣೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಈ ಕುರಿತಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ಆದೇಶದ ಮೇರೆಗೆ, ಮೇ 08 ರಂದು ಸಂಜೆ 5:00 ಗಂಟೆಯಿಂದ ಮೇ 11 ರಂದು ಬೆಳಗ್ಗೆ 6.00 ಗಂಟೆಯವರೆಗೆ ಹಾಗೂ ಮೇ 13 ರಂದು ಬೆಳಗ್ಗೆ 6.00 ಗಂಟೆಯಿಂದ ಮೇ 14 ರ ಬೆಳಿಗ್ಗೆ 6.00 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯ ಸಾಗಾಣಿಕೆ, ವಿತರಣೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿಗಳು ಮದ್ಯ ಮಾರಾಟ ಮಳಿಗೆಗಳಿಗೆ ಬೀಗ ಹಾಕಿ, ಸೀಲ್ ಮಾಡಿದ್ದಾರೆ.
ದೊಡ್ಡಬಳ್ಳಾಪುರದಲ್ಲೂ ಸಹ ಎಲ್ಲಾ ವಿವಿಧ ಮದ್ಯದ ವಹಿವಾಟನ್ನು ನಿಷೇದಿಸಿ ಒಣದಿನಗಳೆಂದು ಘೋಷಿಸಿ ಆದೇಶಿದ್ದು, ಈ ನಿಮಿತ್ತ ಅಬಕಾರಿ ಇಲಾಖೆಯ ಅಬಕಾರಿ ಇನ್ಸ್ ಪೆಕ್ಟರ್ ಎಸ್.ಎಂ.ಪಾಟೀಲ್, ಸಿಬ್ಬಂದಿಗಳಾದ ವಿನಯ್, ಹನುಮಂತರಾಜು, ರಾಜಶೇಖರ್, ಕೃಷ್ಣ, ಮಂಜುನಾಥ್, ಬಸಪ್ಪ, ಸತೀಶ್, ಮುತ್ತಯ್ಯ ಇವರು ತಾಲೂಕು ವ್ಯಾಪ್ತಿಯ ಎಲ್ಲಾ ವಿಧದ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಿ ಬೀಗಕ್ಕೆ ಬಟ್ಟೆ ಸುತ್ತಿ ಅರಗಿನಿಂದ ಸೀಲ್ ಮಾಡಿದ್ದಾರೆ.