ಜಿಲ್ಲೆಯಲ್ಲಿ 8,77,890 ಲಕ್ಷ ಮತದಾರರು, 1137 ಮತಗಟ್ಟೆ ಸ್ಥಾಪನೆ: ಮತದಾನಕ್ಕೆ ಸಕಲ ಸಿದ್ದತೆ-ಡಿಸಿ ಆರ್.ಲತಾ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಮೇ.10 ರಂದು ಮತದಾನ ಹಾಗೂ ಮೇ.13 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲೆಯಲ್ಲಿ ಮತದಾನ ಹಾಗೂ ಮತ ಎಣಿಕೆ ಕಾರ್ಯಕ್ಕೆ ಅಗತ್ಯವಿರುವ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಚುನಾವಣೆ ಸಂಬಂಧ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 4,35,835 ಪುರುಷ ಮತದಾರರು, 4,41,907 ಮಹಿಳಾ ಮತದಾರರು ಹಾಗೂ 148 ಇತರೆ ಮತದಾರರು ಸೇರಿದಂತೆ ಒಟ್ಟು 8,77,890 ಮತದಾರರು ಇದ್ದಾರೆ. ಜಿಲ್ಲೆಯಲ್ಲಿ 130 ಸೇವಾ ಮತದಾರರು, ಒಟ್ಟು 24713 ಯುವ ಮತದಾರರು, 12143 ವಿಕಲಚೇತನ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ 20354 ಮತದಾರರಿದ್ದಾರೆ. ಜಿಲ್ಲೆಯ ಎಲ್ಲಾ ಮತದಾರರರು ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಬೇಕು ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ, ಚುನಾವಣೆಯ ಅಂತಿಮ ಕಣದಲ್ಲಿ 50 ಪುರುಷರು ಹಾಗೂ 06 ಮಹಿಳೆಯರು ಸೇರಿದಂತೆ ಒಟ್ಟು 56 ಅಭ್ಯರ್ಥಿಗಳು ಚುನಾವಣೆ ಎದುರಿಸಲಿದ್ದಾರೆ.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟಾರೆ 1137 ಮತಗಟ್ಟೆಗಳಿವೆ. ನಗರ ಪ್ರದೇಶದಲ್ಲಿ 879 ಹಾಗೂ ಗ್ರಾಮೀಣ ಪ್ರದೇಶದಲ್ಲಿ 258 ಮತಗಟ್ಟೆಗಳಿವೆ.

ಜಿಲ್ಲೆಯ 1137 ಮತಗಟ್ಟೆಗಳಿಗೆ 1470 ಪಿಆರ್ಓ, 1499 ಎಪಿಆರ್ಓ, 2929 ಹಾಗೂ 285 ಮೈಕ್ರೋ ಅಬ್ಸರ್ವರ್ಸ್ಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ 1137 ಮತಗಟ್ಟೆಗಳ ಪೈಕಿ 569 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ಮಾಡಲಾಗುವುದು ಎಂದರು.
ಮತದಾನ ದಿನದಂದು(ಮೇ 10) ಮತಗಟ್ಟೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು, ಸಿಬ್ಬಂದಿ ನಾಳೆ (ಮೇ 09 ರಂದು) ಬೆಳಗ್ಗೆ ಮಸ್ಟರಿಂಗ್ ಕೇಂದ್ರಗಳಿಗೆ ಹಾಜರಾಗಲಿದ್ದಾರೆ. ನಂತರ ಮತಗಟ್ಟೆಗಳಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಚುನಾವಣಾ ಸಾಮಾಗ್ರಿಗಳೊಂದಿಗೆ ಸಂಬಂಧಿಸಿದ ಮತಗಟ್ಟೆಗಳಿಗೆ ಮಧ್ಯಾಹ್ನ ಮೂರು ಗಂಟೆ ವೇಳೆಗೆ ತೆರಳಲಿದ್ದಾರೆ ಎಂದು ತಿಳಿಸಿದರು.
ಮೇ 08 ರಂದು ಸಂಜೆ 06.00 ಗಂಟೆಯಿಂದ ಚುನಾವಣಾ ಬಹಿರಂಗ ಪ್ರಚಾರವನ್ನು ನಿಷೇಧಿಸಲಾಗಿದ್ದು, ದಂಡ ಪ್ರಕ್ರಿಯೆ ಸಂಹಿತೆ ರಡಿ ಪ್ರತಿಬಂದಕಾಜ್ಞೆ ಜಾರಿ ಮಾಡಿ ಆದೇಶಿಸಲಾಗಿದೆ. ಮತದಾನ ಕೊನೆಗೊಳ್ಳಲು ನಿಗದಿಸಪಡಿಸಿದ ಅವಧಿ ಮುಕ್ತಾಯಗೊಳ್ಳುವ ಅವಧಿಯಲ್ಲಿ 5 ಜನ ಮಾತ್ರ ಮನೆ ಮನೆಗೆ ತೆರಳಿ ಪ್ರಚಾರ್ಯ ಕೈಗೊಳ್ಳಲು ಅವಕಾಶವಿರುತ್ತದೆ.

ನಿಷೇಧಾಜ್ಞೆ ಜಾರಿ

ಮೇ.10 ರಂದು ಮತದಾನವು ನಡೆಯಲಿರುವ ಹಿನ್ನೆಲೆ, ಮೇ 08 ರಂದು ಸಂಜೆ 6.00 ಗಂಟೆಯಿಂದ ಮೇ 10 ರಂದು ಮತದಾನ ಮತದಾನ ಮುಕ್ತಾಯವಾಗುವವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಾದ್ಯಂತ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರಡಿ ಷರತ್ತಿಗೊಳಪಡಿಸಿ, ನಿಷೇಧಾಜ್ಞೆ ವಿಧಿಸಲಾಗಿದೆ

ಮೇ 13 ರಂದು ಮತಎಣಿಕೆ ನಡೆಯಲಿರುವ ಹಿನ್ನೆಲೆ, ಮೇ 10 ರ ಸಂಜೆ 6.00 ಗಂಟೆಯಿಂದ ಮೇ 14 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಾದ್ಯಂತ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರಡಿ ಷರತ್ತಿಗೊಳಪಡಿಸಿ, ನಿಷೇಧಾಜ್ಞೆ ವಿಧಿಸಲಾಗಿದೆ ಎಂದರು.

ಮದ್ಯ ಮಾರಾಟ ನಿಷೇಧ

ಮೇ 10 ರಂದು ಮತದಾನ ಹಾಗೂ ಮೇ 13 ರಂದು ಮತ ಎಣಿಕೆ ನಡೆಯಲಿರುವ ಹಿನ್ನೆಲೆ, ಮುಕ್ತ, ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು, ಮೇ 08 ರಂದು ಸಂಜೆ 5:00 ಗಂಟೆಯಿಂದ ಮೇ 11 ರಂದು ಬೆಳಗ್ಗೆ 6.00 ಗಂಟೆಯವರೆಗೆ ಹಾಗೂ ಮೇ 13 ರಂದು ಬೆಳಗ್ಗೆ 6.00 ಗಂಟೆಯಿಂದ ಮೇ 14 ರ ಬೆಳಿಗ್ಗೆ 6.00 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯ ಸಾಗಾಣಿಕೆ, ವಿತರಣೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಚುನಾವಣಾ ಅಕ್ರಮಗಳನ್ನು ತಡೆಯಲು ಮತದಾನ ದಿನದಂದು ಪೊಲೀಸ್ ಸಿಬ್ಬಂದಿ, 400 ಹೋಮಗಾರ್ಡ್, ಸಶಸ್ತ್ರ ಮೀಡಲು ಪಡೆ ಸಿಬ್ಬಂದಿ ಹಾಗು ಕೆ.ಎಸ್.ಆರ್.ಪಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಜಿಲ್ಲೆಗೆ 11 ಕಂಪನಿಯ ಸಶಸ್ತ್ರ ಪಡೆಯನ್ನು ಪೂರೈಸಲಾಗಿದೆ ಹಾಗು ಮತ ಎಣಿಕೆ ದಿನದಂದು ಆಕಾಶ್ ಇಂಟರ್ ನ್ಯಾಷನಲ್ ಶಾಲೆಯ ಸುತ್ತಮುತ್ತ ಮೂರು ಸುತ್ತಿನ ಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಎಂ.ಸಿ.ಸಿ ಮತ್ತು ಸ್ವೀಪ್ ನೋಡಲ್ ಅಧಿಕಾರಿ ವರ್ಣಿತ್ ನೇಗಿ ಅವರು ಮಾತನಾಡಿ, ಮತದಾನ ದಿನದಂದು ಮತಗಟ್ಟೆಗಳಲ್ಲಿ ಮತದಾರರಿಗೆ ವಿಶೇಷ ಸೌಲಭ್ಯಗಳಾದ ನೆರಳಿನ ವ್ಯವಸ್ಥೆ, ಶಾಮಿಯಾನ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯ, ರ್ಯಾಂಪ್ ಅಂಡ್ ರೈಲಿಂಗ್ಸ್, ಗಾಲಿ ಕುರ್ಚಿ, ಅಗತ್ಯವಿರುವವರಿಗೆ ಉಚಿತ ಸಾರಿಗೆ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದರು.

ಮತದಾರರು ಮತದಾನ ಮಾಡುವಂತೆ ಆಕರ್ಷಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ತಲಾ 05 ರಂತೆ 20 ಮಹಿಳಾ(ಸಖಿ) ಮತಗಟ್ಟೆಗಳು, ತಲಾ 01 ರಂತೆ 04 ವಿಕಲಚೇತನ ಮತಗಟ್ಟೆಗಳು, ತಲಾ 01 ರಂತೆ 04 ಯುವ ಮತಗಟ್ಟೆಗಳು, ತಲಾ 01 ರಂತೆ 04 ಎತ್ನಿಕ್ ಮತಗಟ್ಟೆಗಳು ಹಾಗೂ ತಲಾ 01 ರಂತೆ 04 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *