ಕೋವಿಡ್ ರೂಪಾಂತರಿ ಒಮಿಕ್ರಾನ್ ಜೆ.ಎನ್ 1- ಗರ್ಭೀಣಿಯರು, 50 ವರ್ಷ ಮೇಲ್ಪಟ್ಟ ವಯಸ್ಕರು ಮಾಸ್ಕ್ ಧರಿಸುವಂತೆ ಸಲಹೆ- ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹರಡುತ್ತಿರುವ ಕೋವಿಡ್ ಸೋಂಕಿನ ಕುರಿತು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪರಿಸ್ಥಿತಿ  ಅವಲೋಕಿಸಲಾಯಿತು. ಇದು ಕೋವಿಡ್ ರೂಪಾಂತರಿ ಒಮಿಕ್ರಾನ್ ಜೆ.ಎನ್ 1 ತಳಿಯಾಗಿದ್ದು, ಸೌಮ್ಯ ಸ್ವಭಾವದ ಲಕ್ಷಣಗಳನ್ನ ಹೊಂದಿದೆ. ಸಾರ್ವಜನಿಕರು ಆತಂಕ ಪಡುವ ಸ್ಥಿತಿ ಬಂದಿಲ್ಲವಾದರೂ, ಮುನ್ನೆಚ್ಚರಿಕೆ ವಹಿಸುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಕ್ಕಳು, ವೃದ್ಧರಿಗೆ ಕೋವಿಡ್ ಹರಡದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಜ್ವರ, ಶೀತ, ಕೆಮ್ಮು ಕಂಡುಬಂದಿರುವ ಮಕ್ಕಳಿಗೆ ರಜೆ ನೀಡುವಂತೆ ಶಾಲೆಗಳಿಗೆ ಸೂಚನೆ ನೀಡಿ ಮಾರ್ಗಸೂಚಿ ಹೊರಡಿಸಲಾಗುವುದು. ಪೊಷಕರು ಕೂಡ ಮಕ್ಕಳನ್ನ ಶಾಲೆಗೆ ಕಳುಹಿಸದೇ ಮನೆಯಲ್ಲೇ ಆರೈಕೆ ಮಾಡುವುದು ಉತ್ತಮ. ಉಸಿರಾಟದ ಸಮಸ್ಯೆ, ಹೃದಯ ಕಾಯಿಲೆ ಇರುವವರಿಗೆ ಕಡ್ಡಾಯವಾಗಿ ಟೆಸ್ಟಿಂಗ್ ನಡೆಸಲಾಗುತ್ತಿದ್ದು, 5 ಸಾವಿರ RTPCR ಟೆಸ್ಟಿಂಗ್ ಕಿಟ್ ಗಳನ್ನ ರಾಜ್ಯಾದ್ಯಂತ ಆಸ್ಪತ್ರೆಗಳಿಗೆ ವಿತರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೆಮ್ಡಿಸೀವರ್ ಇಂಜೆಕ್ಷನ್ ಅನ್ನು ಕೂಡಾ ಖರೀದಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಗರ್ಭೀಣಿಯರು, 50 ವರ್ಷ ಮೇಲ್ಪಟ್ಟ ವಯಸ್ಕರು ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ. ಸಿಎಂ ಅವರ ಸೂಚನೆಯಂತೆ ಕೋವಿಡ್ ಎದುರಿಸಲು ಆರೋಗ್ಯ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಕೋವಿಡ್ ಸಹಾಯವಾಣಿಯನ್ನ ತೆರೆಯಲಾಗುವುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *