ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಡಾ. ಅಲೋಕ್ ಮೋಹನ್ ಅವರು ಇಂದು (ಮೇ 21) ಸೇವೆಯಿಂದ ನಿವೃತ್ತರಾಗಿದ್ದಾರೆ. ಈ ಹಿನ್ನೆಲೆ, 1993ನೇ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಹಾಗೂ ಹಾಲಿ ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಅವರನ್ನು ಹಂಗಾಮಿ ಡಿಜಿ ಐಜಿಪಿಯಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಡಿಜಿಐಪಿ ಹುದ್ದೆಗೆ ಸೇವಾ ಹಿರಿತನದ ಆಧಾರದ ಮೇಲೆ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಡಾ.ಎಂ.ಎ. ಸಲೀಂ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ ಸರಕಾರವು ಸಲೀಂ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲು ಒಲವು ಹೊಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಆದರೆ, ಸೇವಾ ಜೇಷ್ಠತೆಯ ನಿಯಮಗಳು ಇದಕ್ಕೆ ಅಡ್ಡಿಯಾಗಿವೆ. ಡಾ.ಎಂ.ಎ ಸಲೀಂ ಅವರು ಪ್ರಶಾಂತ್ ಕುಮಾರ್ ಠಾಕೂರ್ ಅವರಿಗಿಂತ ಒಂದು ವರ್ಷ ಕಡಿಮೆ ಸೇವಾ ಹಿರಿತನ ಹೊಂದಿರುವುದರಿಂದ, ಅವರನ್ನು ನೇಮಕ ಮಾಡಿದರೆ ಕಾನೂನು ತೊಡಕುಗಳು ಎದುರಾಗಬಹುದು ಎಂಬುದೂ ಸರಕಾರದ ಚಿಂತೆಯಾಗಿದೆ.
ಈ ನಡುವೆ, ಡಾ.ಎಂ.ಎ. ಸಲೀಂ ಅವರನ್ನು ಹಂಗಾಮಿ ಡಿಜಿಪಿಯಾಗಿ ನೇಮಿಸುವ ಮೂಲಕ ರಾಜ್ಯ ಸರಕಾರವು ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ. ಆದರೆ, ಡಿಜಿ ಐಜಿಪಿ ಹುದ್ದೆಗೆ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ.