ತೆರಿಗೆ ಸಂಗ್ರಹದಲ್ಲಿ ದೊಡ್ಡಬಳ್ಳಾಪುರ ನಗರಸಭೆಯನ್ನು‌ ಹಿಂದಿಕ್ಕಿದ ಬಾಶೆಟ್ಟಿಹಳ್ಳಿ‌ ಪಟ್ಟಣ ಪಂಚಾಯಿತಿ

 

ತೆರಿಗೆ ಸಂಗ್ರಹದಲ್ಲಿ ನಗರಸಭೆಗಿಂತ ಬಾಶೆಟ್ಟಿಹಳ್ಳಿ‌‌ ಪಟ್ಟಣ ಪಂಚಾಯಿತಿ ಮುಂದಿದೆ. ಕೇವಲ 4 ಕೋಟಿ ಮಾತ್ರ ತೆರಿಗೆ ಸಂಗ್ರಹ ಮಾಡುತ್ತಿದ್ದ ಬಾಶೆಟ್ಟಿಹಳ್ಳಿ‌‌ ಪಟ್ಟಣ ಪಂಚಾಯಿತಿ, ಇದೀಗ ದಿಢೀರನೆ 15 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹ ಮಾಡಿ ಗಣನೀಯ ಸಾಧನೆ ಮಾಡಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿದೆ‌‌ ಓದಿ…

ಪಬ್ಲಿಕ್ ಮಿರ್ಚಿ ನ್ಯೂಸ್ ವೆಬ್ ಸೈಟ್ ನೊಂದಿಗೆ ಬಾಶೆಟ್ಟಿಹಳ್ಳಿ‌‌ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನರಸಿಂಹಮೂರ್ತಿ ಮಾತನಾಡಿ, ಮೊದಲು ಬಾಶೆಟ್ಟಿಹಳ್ಳಿ ಪುರಸಭೆಯಾಗಿತ್ತು. ಆಗ ಕೇವಲ 4 ಕೋಟಿಯಷ್ಟು ತೆರಿಗೆ ವಸೂಲಿಯಾಗುತ್ತಿತ್ತು. ಪುರಸಭೆಯಿಂದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ ಮೇಲೆ‌ 2024-25 ಸಾಲಿನಲ್ಲಿ 15 ಕೋಟಿಗಿಂತ ಹೆಚ್ಚು ತೆರಿಗೆ ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದರು.

ಬಾಶೆಟ್ಟಿಹಳ್ಳಿ‌‌ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶವಿದ್ದು, ಇಲ್ಲಿನ ಎಲ್ಲಾ ಕಾರ್ಖಾನೆಗಳಿಗೆ ತೆರಿಗೆ ಕಟ್ಟುವಂತೆ ನೋಟಿಸ್ ನೀಡಿದ್ದೇವೆ. ತೆರಿಗೆ ಪಾವತಿ ಬಗ್ಗೆ ಜನರಿಗೆ ಅರಿವು ಸಹ ಮೂಡಿಸಿದ್ದೇವೆ. ಎಲ್ಲಾದಕ್ಕಿಂತ ಮಿಗಿಲಾಗಿ ಇತ್ತೀಚೆಗೆ ಶಾಸಕ ಧೀರಜ್ ಮುನಿರಾಜ್ ಅವರು ದೊಡ್ಡಬಳ್ಳಾಪುರ ಕೈಗಾರಿಕಾ ಸಂಘದ ಅಧ್ಯಕ್ಷರು, ಸದಸ್ಯರೊಂದಿಗೆ ಸಭೆ ನಡೆಸಿ, ತೆರಿಗೆ ಪಾವತಿ, ತಾಲ್ಲೂಕಿನ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಾಭಿವೃದ್ಧಿ, ವ್ಯವಹಾರ ನೀತಿ, ಉದ್ಯೋಗ ಸೃಷ್ಟಿ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಿದರು. ಅದರ ಫಲವಾಗಿ ಇಂದು ಇಷ್ಟರ ಮಟ್ಟಿಗೆ ತೆರಿಗೆ ಸಂಗ್ರಹ ಮಾಡುವಲ್ಲಿ ನಾವು ಯಶಸ್ವಿ ಕಂಡಿದ್ದೇವೆ ಎಂದರು.

ತೆರಿಗೆ ಪಾವತಿಗೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಆನ್ ಲೈನ್ ಪಾವತಿಗೆ ವೆಬ್ ಸೈಟ್ ಕೂಡ ಜಾರಿ ಮಾಡಲಾಗಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತೆರಿಗೆ ಪಾವತಿಸಲು ಸೂಚಿಸಲಾಗಿತ್ತು. ಇದರಿಂದ ನಮಗೂ ಹಾಗೂ ಜನರಿಗೆ ತುಂಬಾ ಅನುಕೂಲವಾಗಿದೆ ಎಂದರು.

ಕಾಲಕಾಲಕ್ಕೆ ತೆರಿಗೆ ಕಟ್ಟುವುದರಿಂದ ಆಗುವ ಉಪಯೋಗಗಳ ಬಗ್ಗೆ ಜನರಿಗೆ ಜಾಹೀರಾತು, ಪತ್ರಿಕಾ ಪ್ರಕಟಣೆ, ಆಸ್ತಿ ಮಾಲೀಕರ ಬಳಿ ಹೋಗಿ ನಾವು ಮತ್ತು ಸಿಬ್ಬಂದಿ ಅರಿವು ಮೂಡಿಸಲಾಗಿದೆ. ತೆರಿಗೆ ಹಣದಲ್ಲಿ ಸಂಪೂರ್ಣ ಬಾಶೆಟ್ಟಿಹಳ್ಳಿ‌‌ ಪಟ್ಟಣ ಪಂಚಾಯಿತಿಗೆ ಬರುವ ಎಲ್ಲಾ ಗ್ರಾಮಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ದಿ ಮಾಡಲಾಗುವುದು ಎಂದರು.

ನಂತರ ಬಾಶೆಟ್ಟಿಹಳ್ಳಿ ಪಟ್ಟಣ‌ಪಂಚಾಯಿತಿ ಪ್ರಭಾರ ಕಂದಾಯ ನಿರೀಕ್ಷಿಕ ಶ್ರೀನಿವಾಸ್ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಕಡ್ಡಾಯವಾಗಿ ಪಾವತಿಸಬೇಕಾದ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಪ್ರತಿ ವರ್ಷದ ಪ್ರಾರಂಭದ ಏಪ್ರಿಲ್ ತಿಂಗಳಿನಲ್ಲಿ ಪಾವತಿಸಿದವರಿಗೆ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಜುಲೈ ತಿಂಗಳಿನಿಂದ ಪ್ರತಿ ತಿಂಗಳಿಗೆ ಶೇ.2ರಷ್ಟು ದಂಡ ವಿಧಿಸಿ ವಸೂಲಿ ಮಾಡಲಾಗುವುದು. ಆದುದರಿಂದ ಆಸ್ತಿಗಳ ಮಾಲೀಕರುಗಳು ಪಟ್ಟಣ ಪಂಚಾಯಿತಿ ನೀಡಲಾಗುವ ಆಸ್ತಿ ತೆರಿಗೆ ನಮೂನೆ-2 ರ ಮೂಲಕ ಅಥವಾ ಆಸ್ತಿ ಆನ್ ಲೈನ್ ವೆಬ್ ಸೈಟ್ www.bashettihalli.mrc.gov.in ನ್ನು ಉಪಯೋಗಿಸಿಕೊಂಡು ಸ್ವಯಂಘೋಷಿತ ಆಸ್ತಿ ತೆರಿಗೆ ಚಲನ್ ಪಡೆದು UPI APP ಅಥವಾ ಬ್ಯಾಂಕ್‌ನಲ್ಲಿ ತೆರಿಗೆ ಪಾವತಿಸುವ ಕುರಿತು ಜನರಿಗೆ ಅರಿವು ಮೂಡಿಸಲಾಗಿದೆ ಎಂದರು.

ಆಸ್ತಿ ತೆರಿಗೆಯನ್ನು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಪಾವತಿಸಿದರೆ ಆಸ್ತಿ ತೆರಿಗೆಯ ಮೇಲೆ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು. ಆಸ್ತಿ ತೆರಿಗೆಯನ್ನು ಮೇ ಮತ್ತು ಜೂನ್ ತಿಂಗಳಲ್ಲಿ ದಂಡರಹಿತವಾಗಿ ಪಾವತಿಸಲು ಅವಕಾಶವಿದೆ. ಜುಲೈ ತಿಂಗಳಿಂದ ಪ್ರತಿ ತಿಂಗಳಿಗೆ ಶೇ 2% ರಷ್ಟು ದಂಡ ವಿಧಿಸಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!