ಕೊಡಗಿನ ಶ್ರೀಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳೂರು ಗ್ರಾಮದ ರೋಷನ್ ಕುಮಾರ್ ಎಂಬಿಬ್ಬರು ಸಹೋದರರ ಮೇಲೆ ರಿವಾಲ್ವಾರ್ ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪಿಗಳಾದ ಬಾಳೇರ ಟಿಮ್ಸನ್ ಮತ್ತು ಈತನ ತಾಯಿ ಬಾಳೇರ ಜ್ಯೋತಿ ಅವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿ.ಪಿ. ಸಚಿನ್ ಕುಮಾರ್ ರವರು ದಿನಾಂಕ 13-05-2025 ರಂದು ಮಧ್ಯಾಹ್ನ 4.30 ಗಂಟೆಗೆ ಮನೆಯಲ್ಲಿದ್ದಾಗ ಬಾಳೇರ ಟಿಮ್ಸನ್ ಮತ್ತು ಈತನ ತಾಯಿ ಬಾಳೇರ ಜ್ಯೋತಿ ಕಾರಿನಲ್ಲಿ ಬಂದಿದ್ದಾರೆ. ನಿನ್ನೊಂದಿಗೆ ಮಾತನಾಡಬೇಕು ಎಂದು ಸಚಿನ್ ಕುಮಾರ್ ರವರನ್ನು ಕರೆದಿದ್ದಾರೆ. ಮನೆಯಿಂದ ಹೊರಗೆ ಬಂದ ಸಚಿನ್ ಕುಮಾರ್ ಜೊತೆ ಟಿಮ್ಸ್ ಜಗಳ ನಿರತನಾಗಿದ್ದಾನೆ. ಜೋರಾದ ಬೊಬ್ಬೆ ಶಬ್ದವನ್ನು ಕೇಳಿ ಸಚಿನ್ ಕುಮಾರ್ ರವರ ಚಿಕ್ಕಪ್ಪನ ಮಗನಾದ ರೋಷನ್ ಕುಮಾರ್ ಸ್ಥಳಕ್ಕೆ ಬಂದಿದ್ದಾರೆ. ಅವರಿಗೆ ಟಿಮ್ಸ ನಿಂದಿಸಿ ತಲೆಗೆ ಹೊಡೆದಿದ್ದು, ಆತನ ತಾಯಿ ಜ್ಯೋತಿ ಸಚಿನ್ ಕುಮಾರ್ ರವರ ಎಡ ಬೆನ್ನಿಗೆ ಕಚ್ಚಿದ್ದಾರೆ. ನಂತರ ಟಿಮ್ಸ ಕಾರಿನಲ್ಲಿದ್ದ ರಿವಾಲ್ವಾರ್ ತಂದು ಏಕಾಏಕಿ ಸಚಿನ್ ಕುಮಾರ್ ರವರ ಬಲಗಾಲಿಗೆ ಮತ್ತು ರೋಷನ್ ಕುಮಾರ್ ರವರ ಎಡ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆ. ಇವರಿಬ್ಬರ ವಿರುದ್ಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಿರಾಜಪೇಟೆ ಉಪವಿಭಾಗದ ಡಿಎಸ್ಪಿ ಮಹೇಶ್ ಕುಮಾರ್, ಕುಟ್ಟ ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ, ಶ್ರೀಮಂಗಲ ಸಬ್ ಇನ್ಸ್ ಪೆಕ್ಟರ್ ರವೀಂದ್ರ, ಅಪರಾಧ ಪತ್ತೆ ಸಿಬ್ಬಂದಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿ ದಿನಾಂಕ 14-05-2025ರಂದು ಆರೋಪಿಗಳಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಗಳಾದ ಟಿಮ್ಸ ಮತ್ತು ಜ್ಯೋತಿ ಆಸ್ತಿ ವಿಚಾರವಾಗಿ ಜಗಳವಾಡಿ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
*ಘಟನೆಗೆ ಕಾರಣ*
ಕಳೆದ ಹಲವಾರು ವರ್ಷಗಳಿಂದ ಆಸ್ತಿ ಸಂಬಂಧವಾಗಿ ಎರಡು ಕಡೆ ವಾದ ವಿವಾದಗಳು ಏರ್ಪಟ್ಟು, ಗಾಯಾಳುಗಳ ತಂದೆಯವರಾದ ಪೂವಪ್ಪನವರು , ಟಿಮ್ಸ್ ಅವರಿಗೆ ಕಂದಾಯ ಇಲಾಖೆ ದಾಖಲಾತಿಗಳಿಗೆ ಸಹಿ ಹಾಕಿಕೊಡದೆ ಕಿರುಕುಳ ನೀಡುತ್ತಿದ್ದರು. ಹಲವು ಬಾರಿ ಈ ಬಗ್ಗೆ ಕೇಳಿಕೊಂಡರು ಸ್ಪಂದಿಸದೆ ಇದ್ದಾಗ, ಮೊನ್ನೆ ಈ ಬಗೆ ಮತ್ತೊಮ್ಮೆ ಮನೆಯ ಬಳಿಗೆ ತಾಯಿ ಮಗ ತೆರಳಿ ಕೇಳಿಕೊಂಡಾಗಲೂ ಕೂಡ ಸ್ಪಂದಿಸದ ಇದ್ದಾಗ, ಮಾತಿಗೆ ಮಾತು ಬೆಳೆದು ಈ ಘಟನೆ ನಡೆದಿದೆ ಎಂದು ಈ ವಿಚಾರ ಬಲ್ಲವರು ಹಲವರು ಹೇಳಿಕೊಂಡಿದ್ದಾರೆ.