ದೊಡ್ಡಬಳ್ಳಾಪುರ ನಗರದ ವನ್ನಿಗರಪೇಟೆ ಸಪ್ತಮಾತೃಕ ಮಾರಿಯಮ್ಮ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆದ ಕರಗ ಮಹೋತ್ಸವ.
ಕುಪ್ಪಂನ ಪೂಜಾರಿ ಮುನಿರತ್ನಂ ಬಾಲಾಜಿ ಕರಗ ಹೊತ್ತು ಕರಗದ ಧಾರ್ಮಿಕ ವಿಧಿ ನೆರವೇರಿಸಿದರು. ಕರಗ ಉತ್ಸವವನ್ನು ಸಾವಿರಾರು ಭಕ್ತರು ಜನ ವೀಕ್ಷಿಸಿ, ಕರಗದ ನೃತ್ಯದ ಹೆಜ್ಜೆಗೆ ಭಕ್ತಾದಿಗಳು ಭಾವಪರವಶರಾದರು.
ನಗರದ ಗಗನಾರ್ಯಸ್ವಾಮಿ ಮಠದಿಂದ ಹೊರಟ ಉತ್ಸವ ಹಳೆ ಬಸ್ ನಿಲ್ದಾಣ, ನೆಲದಾಂಜನೇಯಸ್ವಾಮಿ ದೇವಾಲಯ, ಏಳುಸುತ್ತಿನ ಕೋಟೆ, ತೂಬಗೆರೆ ಪೇಟೆ, ವನ್ನಿಗರಪೇಟೆ ಸೇರಿದಂತೆ ಮತ್ತಿತರ ಕಡೆ ಸಂಚರಿಸಿ ದೇವಾಲಯದ ಬಳಿ ಆಗಮಿಸಿತು.
ಮಾರಿಯಮ್ಮ ಕರಗ ಮಹೋತ್ಸವ ಹಿನ್ನೆಲೆ ದೇವಾಲಯವನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು.
14 ವರ್ಷಗಳಿಂದ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡುನಲ್ಲಿಯೂ ಕರಗ ಹೊತ್ತಿರುವ ಆಂಧ್ರಪ್ರದೇಶದ ಕುಪ್ಪಂ ಪೂಜಾರಿ ಮುನಿರತ್ನಂ ಬಾಲಾಜಿ, 5ನೇ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಕರಗ ಹೊತ್ತಿದ್ದರು. ಕರಗ ಅಂಗವಾಗಿ ನಗರದ ವಿವಿಧೆಡೆ ಪೂಜೆ ಪ್ರಸಾದ ವಿನಿಯೋಗ ನಡೆಯಿತು.
ಕರಗ ಮಹೋತ್ಸವ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಗಣ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ ನಡೆಯಿತು. ಮೇ 14 ರಂದು ಸಂಜೆ 4ಕ್ಕೆ ಒನಕೆ ನಾಟ್ಯ ಮತ್ತು ವಸಂತೋತ್ಸವ ನಡೆಯಲಿದೆ.
ನಗರದ ವಿವಿಧ ವೃತ್ತಗಳಲ್ಲಿ ಕಲಾವಿದರಿಂದ ತಯಾರಿಸಲಾದ ವಿವಿಧ ದೇವತೆಗಳ ವಿದ್ಯುತ್ ದೀಪಾಲಂಕೃತ ಬೃಹತ್ ಕಟೌಟ್‌ಗಳು ಕರಗದ ಸಂಭ್ರಮಕ್ಕೆ ಮೆರುಗು ನೀಡಿವೆ.