1 ಎಕರೆ 10 ಗುಂಟೆ ಸರ್ಕಾರಿ ಗೋಮಾಳ ಭೂಮಿ ಒತ್ತುವರಿ ತೆರವು: ಸುಮಾರು 70 ಲಕ್ಷ ಮೌಲ್ಯದ ಜಾಗ ಸರ್ಕಾರ ವಶ

ದೊಡ್ಡಬಳ್ಳಾಪುರ ತಾಲೂಕಿನ‌ ಕಾರನಾಳ ಗ್ರಾಮದ ಸರ್ವೇ ನಂಬರ್ 49ರಲ್ಲಿ 1 ಎಕರೆ 10 ಗುಂಟೆ ಸರ್ಕಾರಿ ಗೋಮಾಳ ಜಾಗವನ್ನ ಸುತ್ತಮುತ್ತಲಿನ 5 ಮಂದಿ ಒತ್ತುವರಿ ಮಾಡಿದ್ದರು. ಈ ಒತ್ತುವರಿ ಭೂಮಿಯನ್ನು ಲೋಕಾಯುಕ್ತರ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಜೆಸಿಬಿ ಮೂಲಕ ತೆರವು ಕಾರ್ಯಾ ನಡೆಸಿದ್ದಾರೆ. ಈ ಮೂಲಕ ಸುಮಾರು 70 ಲಕ್ಷ ಮೌಲ್ಯದ ಜಾಗವನ್ನ ಸರ್ಕಾರದ ವಶಕ್ಕೆ ಪಡೆದಿದ್ದಾರೆ.

ಕಾರನಾಳ ಗ್ರಾಮದ ಸರ್ವೆ ನಂಬರ್ 49ರಲ್ಲಿ 1 ಎಕರೆ 10 ಗುಂಟೆ ಸರ್ಕಾರಿ ಗೋಮಾಳ ಜಾಗವನ್ನ ಸುತ್ತಮುತ್ತಲಿನ 5 ಮಂದಿ ಒತ್ತುವರಿ ಮಾಡಿದ್ದರು, ನಂಜಪ್ಪ, ಸಂಜೀವರಾಯಪ್ಪ, ನಾರಾಯಣಪ್ಪ , ರವಿ.ಕವಿತಾ ಒತ್ತುವರಿ ಮಾಡಿದ್ದರು. ಒತ್ತುವರಿ ಮಾಡಿದ ಜಾಗದಲ್ಲಿ ಮನೆ ಮತ್ತು ತೆಂಗಿನ ಮರಗಳನ್ನ ಹಾಕಿಕೊಂಡಿದ್ದರು. ಒತ್ತುವರಿ ತೆರವು ಮಾಡುವಂತೆ ವೆಂಕಟೇಶಪ್ಪ ಎಂಬುವವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಲೋಕಾಯುಕ್ತರ ಆದೇಶದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒತ್ತುವರಿ ಭೂಮಿಯನ್ನು ತೆರವುಗೊಳಿಸಿದ್ದಾರೆ.

ಉಪ ತಹಶೀಲ್ದಾರ್ ವೆಂಕಟೇಶ್ ಮೂರ್ತಿ, ತೂಬಗೆರೆ ಹೋಬಳಿ ರಾಜಸ್ವ ಅಧಿಕಾರಿ ನರಸಿಂಹ ಮತ್ತು ಭೂಮಾಪನ ಇಲಾಖೆಯ ಸಿಬ್ಬಂದಿ ಒತ್ತುವರಿ ತೆರವು ಕಾರ್ಯದಲ್ಲಿ ಭಾಗಿಯಾಗಿದ್ದರು.

ಒತ್ತುವರಿ ಜಾಗದಲ್ಲಿ ಕಟ್ಟಲಾಗಿದ್ದ ಮನೆಯನ್ನ ಜೆಸಿಬಿ ಮೂಲಕ ಕೆಡವಲಾಗಿದ್ದು, ಒತ್ತುವರಿ ಜಾಗವನ್ನ ಗುರುತಿಸಿ ಟ್ರಂಚ್ ತೊಡಿ ಗಡಿಯನ್ನ ಗುರುತಿಸಲಾಗಿದೆ.

ಒತ್ತುವರಿದಾರರು ಸಹ ಕಾರ್ಯಾಚರಣೆಗೆ ಸಹಕರಿಸಿದ್ದಾರೆ, ನಿರ್ಮಿತಿ ಕೇಂದ್ರದಿಂದ ಕಾಂಪೌಂಡ್ ನಿರ್ಮಾಣ ಮಾಡಿ, ಮುಂದಿನ ದಿನಗಳಲ್ಲಿ ಒತ್ತುವರಿಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ತಹಶೀಲ್ದಾರ್ ವೆಂಕಟೇಶ್ ಮೂರ್ತಿ ತಿಳಿಸಿದರು.

Leave a Reply

Your email address will not be published. Required fields are marked *