ರಾಷ್ಟ್ರೀಯ ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ಕೂಡ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರದ ಜಾತಿ ಗಣತಿ ನಿರ್ಧಾರಕ್ಕೆ ಕರ್ನಾಟಕದಲ್ಲಿ ಬಹುತೇಕ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತಿವೆ.
ಸಾಮಾಜಿಕ-ಆರ್ಥಿಕ ಅಂಶಗಳನ್ನು ಒಳಗೊಂಡ ಗಣತಿಯ ಅಗತ್ಯವನ್ನು ಕಾಂಗ್ರೆಸ್ ನಾಯಕರು ಒತ್ತಿ ಹೇಳಿದರೆ, ಬಿಜೆಪಿ ನಾಯಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈ ವಿಷಯದಲ್ಲಿ ತೀವ್ರವಾದ ರಾಜಕೀಯ ವಾಗ್ವಾದಗಳು ನಡೆಯುತ್ತಿವೆ. ಜಾತಿ ಗಣತಿಯ ಪಾರದರ್ಶಕತೆ ಮತ್ತು ಅದರ ಅನುಷ್ಠಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಈ ಕುರಿತು ನಗರದಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದ ವೈಜ್ಞಾನಿಕ ಗಣತಿ ನಡೆಯಲಿದೆ. ಕಾಂಗ್ರೆಸ್ ಯಾವತ್ತೂ ಜಾತಿಗಣತಿ ಮಾಡಲು ಯತ್ನಿಸಿಲ್ಲ. ಈಗ ಪ್ರಧಾನಿ ಮೋದಿ ಸಂಪುಟ ತೀರ್ಮಾನ ಮಾಡಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಜಾತಿಗಣತಿ ಬಹಳ ಗೊಂದಲ ಆಗಿತ್ತು. ರಾಜ್ಯ ಸರ್ಕಾರ ಕದ್ದುಮುಚ್ಚಿ ಜಾತಿಗಣತಿಯನ್ನ ಮಾಡಿತ್ತು. ಎಲ್ಲ ಜಾತಿಗಳ ಗಣತಿ ಮಾಡಿಲ್ಲ ಎಂದು ದೂರು ಬಂದಿತ್ತು. ಆದ್ದರಿಂದ ಕೇಂದ್ರ ಸರ್ಕಾರ ವೈಜ್ಞಾನಿಕ, ಸ್ಪಷ್ಟವಾಗಿ ಜಾತಿ ಸಮೀಕ್ಷೆ ಮಾಡುತ್ತೆ ಎಂದರು.
ಭಾರತದಲ್ಲಿಜಾತಿಗಣತಿಗೆ ಶತಮಾನಗಳ ಇತಿಹಾಸವಿದೆ. ದೇಶದಲ್ಲಿ ಮೊದಲ ಬಾರಿಗೆ 1891ರಲ್ಲಿ ಜಾತಿಗಣತಿ ಮಾಡಲಾಯಿತು. ಇದಾದ ಬಳಿಕ ಬ್ರಿಟಿಷರು 10 ವರ್ಷಕ್ಕೊಮ್ಮೆ ಜಾತಿಗಣತಿ ನಡೆಸಿದರು. 1931 ರವರೆಗೂ ಜಾತಿಗಣತಿ ಮುಂದುವರಿಯಿತು. ಆದರೆ, ಅದೇ ವರ್ಷ ಜಾತಿಗಣತಿಯನ್ನು ರದ್ದುಪಡಿಸಲಾಯಿತು. ಭಾರತದಲ್ಲಿ 1931ರಿಂದ ಇದುವರೆಗೆ ಜಾತಿವಾರು ಸಮೀಕ್ಷೆ ಅಥವಾ ಗಣತಿ ಮಾಡಿಲ್ಲ. ಜನಗಣತಿ ವೇಳೆಯೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಹೊರತುಪಡಿಸಿ 1931ರಿಂದ ಬೇರೆ ಸಮುದಾಯದವರ ಜಾತಿ ಕುರಿತ ಮಾಹಿತಿಯನ್ನು ಸಂಗ್ರಹಿಸಿಲ್ಲ ಎಂದರು.
ಜಾತಿಗಣತಿಯಿಂದ ತಳ ಸಮುದಾಯದವರಿಗೂ ಮೀಸಲು ಹಾಗೂ ಸರಕಾರದ ಯೋಜನೆ ನೀಡಲು ಸಾಧ್ಯ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ನಿಖರವಾಗಿ ತಿಳಿದು, ಸಮಾನ ಅವಕಾಶ ನೀಡುವುದು ಜಾತಿ, ಒಳಜಾತಿಗಳಲ್ಲೇ ಇರುವ ಅಸಮಾನತೆ, ಕೆಲವೇ ಜಾತಿಗೆ ಸೌಕರ್ಯಗಳು ಸೀಮಿತವಾಗಿರುವುದನ್ನು ತಡೆಯಬಹುದು ಎಂದು ತಿಳಿಸಿದರು.
ಈ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿ ನಾರಾಯಣ್, ಬಿಜೆಪಿ ಮಹಿಳಾ ಮೋರ್ಚಾ ಮಾಜಿ ರಾಜ್ಯ ಕಾರ್ಯದರ್ಶಿ ಕು.ನಿಶ್ವಿತಾ, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಎಚ್.ರಾಮಕೃಷ್ಣಪ್ಪ, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.