ಹದಗೆಟ್ಟ ಕಾರ್ಮಲ್ ಜ್ಯೋತಿ ಶಾಲೆ ರಸ್ತೆ: ಕ್ಯಾರೆ ಎನ್ನದ ಅಧಿಕಾರಿಗಳು, ಜನಪ್ರತಿನಿಧಿಗಳು

ನಗರದ ಕೋರ್ಟ್ ಮುಂಭಾಗದಿಂದ ಕಾರ್ಮಲ್ ಜ್ಯೋತಿ ಶಾಲೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯನ್ನು ಸಂಪರ್ಕಿಸುವ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸ್ಥಳೀಯರು ರಸ್ತೆ ದುರಸ್ತಿಗಾಗಿ ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಕ್ಯಾರೆ ಎನ್ನದೇ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ವಾಹನ ಸವಾರರು ಹಾಗೂ ವಿನಾಯಕ ನಗರದ ನಿವಾಸಿಗಳು ದೂರಿದ್ದಾರೆ.

ಯುಜಿಡಿ ಛೇಂಬರ್ ತುಂಬಿ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದು, ವಾಹನ ಸವಾರರು ಹಾಗೂ ರಸ್ತೆ ಅಕ್ಕಪಕ್ಕದ ಮನೆಯವರು ಪ್ರತಿನಿತ್ಯ ನರಕಯಾತನೆ ಅನುಭವಿಸುವ ದುಸ್ಥಿತಿ ಎದುರಾಗಿದೆ.

ನೂರಾರು ವಾಹನಗಳು ಸಂಚರಿಸುವ, ಸಾವಿರಾರು ಜನರು ಓಡಾಡುವ ರಸ್ತೆಗಳು ಗುಂಡಿಗಳಿಂದ ತುಂಬಿಕೊಂಡಿವೆ. ಈ ರಸ್ತೆ ದುರಸ್ತಿಗೊಳಿಸಿ ಹಲವು ವರ್ಷಗಳೇ ಕಳೆದಿದೆ. ಮಳೆ ಬಂದರೆ ಮಳೆ ನೀರು ಸರಾಗವಾಗಿ ಹರಿಯುವುದಿಲ್ಲ. ಒಂದು ಸಣ್ಣ ಮಳೆ ಸುರಿದರೂ ಕೆಸರುಗದ್ದೆಯಂತಾಗುತ್ತದೆ.‌ ವಾಹನ ಸವಾರರು ಕೆಳಗೆ ಜಾರಿ ಬೀಳುವ ಭಯದಲ್ಲೇ ಮುಂದೆ ಸಾಗುತ್ತಾರೆ. ಮಕ್ಕಳು, ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಹಲವು ಬಾರಿ ಈ ರಸ್ತೆಯಲ್ಲಿ ಎದ್ದು ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಮಳೆ ಬರುವ ಮುನ್ನ ಧೂಳಿನ ಆಗರವಾಗಿದ್ದ ಈ ರಸ್ತೆ ಈಗ ಮಳೆಗಾಲ ಹಿನ್ನೆಲೆ ಸಂಚರಿಸುವವರಿಗೆ ಕೆಸರಿನ ಮಜ್ಜನ ಮಾಡಿಸುತ್ತಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು‌ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ದುರಸ್ತಿ ಮಾಡದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!