ದೇವರ ಆಟ ಬಲ್ಲವರಾರು……..ಕೊಲ್ಲುವ ಆಟದಲ್ಲಿ ಕಾಯುವ ದೇವರೆಲ್ಲಿ….?

ಜಗತ್ತಿನ ಬಹುತೇಕ ಜನ ಈ ಜಗತ್ತನ್ನು ದೇವರೆಂಬ ವ್ಯಕ್ತಿ – ಶಕ್ತಿ ಸೃಷ್ಟಿಸಿದೆ, ಆತನ ಮೂಲಕವೇ ಎಲ್ಲವೂ ನಡೆಯುತ್ತಿದೆ. ಆತನಿಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎಂಬ ಅಭಿಪ್ರಾಯವನ್ನು, ಭಕ್ತಿಯನ್ನು, ಆರಾಧನೆಯನ್ನು, ನಂಬಿಕೆಯನ್ನು, ಪೂಜನೀಯ ಭಾವನೆಯನ್ನು ಹೊಂದಿದ್ದಾರೆ. ಎಲ್ಲೋ ಕೆಲವರು ಮಾತ್ರ ಆ ದೇವರಿಗೆ ಒಂದು ಹುಲ್ಲು ಕಡ್ಡಿಯನ್ನು ಅಲುಗಾಡಿಸುವ ಶಕ್ತಿಯೂ ಇಲ್ಲ, ಏಕೆಂದರೆ ದೇವರೇ ಇಲ್ಲ ಎನ್ನುವ ಅಭಿಪ್ರಾಯವನ್ನು ಹೊಂದಿದ್ದಾರೆ.

ಇರಲಿ, ಅದು ಅವರವರ ಭಾವಕ್ಕೆ. ಆದರೆ ಈ ಕ್ಷಣದ ನಮ್ಮ ದೇಶದ ಪರಿಸ್ಥಿತಿಯನ್ನು ನೋಡಿದರೆ ಕೊಲ್ಲುವವರು ಯಥೇಚ್ಛವಾಗಿ ಕಾಣುತ್ತಿದ್ದಾರೆ. ಬೇರೆ ಬೇರೆ ಕಾರಣಗಳಿಗಾಗಿ ಕೊಲ್ಲುತ್ತಲೇ ಇದ್ದಾರೆ. ಆದರೆ ಕಾಯುವ ದೇವರು ಮಾತ್ರ ಕಾಣುತ್ತಿಲ್ಲ. ಈಗ ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಿರಾಯುಧರಾದ ಅಮಾಯಕ ಪ್ರವಾಸಿಗರನ್ನು ಕೊಂದವರು ಮತ್ತು ಈಗ ಕೊಂದವರನ್ನು ಅಟ್ಟಾಡಿಸಿಕೊಂಡು ಕೊಲ್ಲಲು ಭಾರತದ ಸೈನಿಕರು ಹೋರಾಡುತ್ತಿದ್ದಾರೆ, ಕೆಲವರನ್ನು ಈಗಾಗಲೇ ಹೊಡೆದುರುಳಿಸಿದ್ದಾರೆ ಸಹ. ಇದೆಲ್ಲವೂ ಮನುಷ್ಯನ ನಾಗರಿಕ ಸಮಾಜದ ಸಹಜ ಘಟನೆಗಳು. ಇದು ಮಾನವ ಇತಿಹಾಸದಲ್ಲಿ ನಡೆದುಕೊಂಡೇ ಬಂದಿದೆ. ಆದರೆ ಕಾಯುವವ ಮಾತ್ರ ಸಿಗುತ್ತಲೇ ಇಲ್ಲ. ಕಾಣುತ್ತಲೇ ಇಲ್ಲ.

ಜನ ಕೊಲ್ಲುವವರನ್ನು ಕೇಳುತ್ತಾರೆ, ಸರ್ಕಾರಗಳನ್ನು ಕೇಳುತ್ತಾರೆ, ಭದ್ರತಾ ಪಡೆಗಳನ್ನು ಕೇಳುತ್ತಾರೆ. ಆದರೆ ತಾವು ಪ್ರತಿನಿತ್ಯ ನಂಬಿ ಪೂಜಿಸುವ ದೇವರನ್ನು ಮಾತ್ರ ಈ ವಿಷಯದಲ್ಲಿ ಪ್ರಶ್ನಿಸುವುದೇ ಇಲ್ಲ. ಏಕೆ ಹೀಗಾಯಿತು, ಹೀಗಾಗದಂತೆ ತಡೆಯುವುದು ಹೇಗೆ, ಮುಂದೆ ನಾವು ಹೇಗಿರಬೇಕು ಎಂದು ಕೇಳುವುದಿಲ್ಲ. ಈ ಎಲ್ಲಕ್ಕೂ ತಾವು ಪೂಜಿಸುವ ದೇವರೇ ಕಾರಣ ಎಂದು ಭಾವಿಸುತ್ತಾರೆ, ಆದರೆ ಆ ದೇವರನ್ನು ಮಾತ್ರ ಪ್ರಶ್ನಿಸುವುದೇ ಇಲ್ಲ, ಅಷ್ಟೇ ಅಲ್ಲ ದೇವರ ಅಸ್ತಿತ್ವವನ್ನು ಪ್ರಶ್ನಿಸಿದರೆ ಪ್ರಶ್ನಿಸಿದವರನ್ನೇ ಕೊಲ್ಲುತ್ತಾರೆ, ಜೊತೆಗೆ ನಮ್ಮ ದೇವರೇ ಶ್ರೇಷ್ಠ, ಆತನೇ ಶಕ್ತಿಶಾಲಿ ಎಂದು ಬಲವಾಗಿ ನಂಬುತ್ತಾರೆ.

ಎಷ್ಟೊಂದು ವಿಚಿತ್ರವಲ್ಲವೇ, ನಾವು ನೋಡುವ ಸಿನಿಮಾಗಳಲ್ಲಿ ಅದೂ ಮನುಷ್ಯನ ಕಾಲ್ಪನಿಕ ಚಿತ್ರಣದಲ್ಲಿಯೂ ಸಹ ದುಷ್ಟರ ಶಿಕ್ಷೆಗಾಗಿ, ಶಿಷ್ಠರ ರಕ್ಷಣೆಗಾಗಿ ನಾಯಕ ಎಲ್ಲಿಂದಲೋ, ಯಾವುದೋ ರೂಪದಲ್ಲೋ ಪ್ರತ್ಯಕ್ಷನಾಗಿ ರಕ್ಷಿಸುತ್ತಾನೆ. ಆದರೆ ವಾಸ್ತವದಲ್ಲಿ ಹಾಗಾಗುತ್ತಲೇ ಇಲ್ಲ. ಬದಲಾಗಿ ದೇವರ ಬಗ್ಗೆ ಇನ್ನಷ್ಟು ಭಾವನಾತ್ಮಕ ನಂಬಿಕೆಗಳನ್ನು ಬೆಳೆಸಿಕೊಳ್ಳುತ್ತಾರೆ.

ಉದಾಹರಣೆಗೆ,
ಪೆಹಲ್ಗಾಮ್ ನಲ್ಲಿ ಆ ಸಮಯದಲ್ಲಿ ಸುಮಾರು 400 ರಷ್ಟು ಜನ ಇದ್ದರು ಮತ್ತು ಇನ್ನೊಂದಿಷ್ಟು ಜನ ಯಾವುದೇ ಕ್ಷಣದಲ್ಲಿ ಅಲ್ಲಿಗೆ ಹೋಗಬಹುದಾದ ಸಾಧ್ಯತೆ ಇತ್ತು. ಆದರೆ ಅದರಲ್ಲಿ 28 ಜನ ಸಾಯುತ್ತಾರೆ. ಉಳಿದವರು ಬದುಕಿ ಬರುತ್ತಾರೆ. ಆ ಉಳಿದವರು ಹೇಳುವುದು ಆ ದೇವರು ನಮ್ಮನ್ನು ಕಾಪಾಡಿದ ಎಂದು. ಆದರೆ ಅದೇ ಜನ ದೇವರು ಏಕೆ ಆ 28 ಜನರನ್ನೂ ಕಾಪಾಡಲಿಲ್ಲ ಎಂದು ಮಾತ್ರ ಕೇಳುವುದೇ ಇಲ್ಲ.

ಇಂಟಲಿಜೆನ್ಸ್ ಫೈಲ್ಯೂರ್, ಸರ್ಕಾರದ ನಿರ್ಲಕ್ಷ ಮುಂತಾಗಿ ಕೆಲವರು ಹೇಳಿದರೆ, ಇನ್ನೊಂದು ಧರ್ಮದ ಮತಾಂಧತೆ, ಕಾಶ್ಮೀರದ ಸಮಸ್ಯೆ, ಪಾಕಿಸ್ತಾನದ ಪಿತೂರಿ ಇದಕ್ಕೆ ಕಾರಣ ಎಂದು ಮತ್ತಷ್ಟು ಜನರನ್ನು ಟೀಕಿಸುತ್ತಾರೆ. ಆದರೆ ಯಾರೊಬ್ಬರೂ, ಎಲ್ಲಿಯೂ ಆ ಕಾಯುವವನನ್ನು ಮಾತ್ರ ಪ್ರಶ್ನಿಸುವುದಿಲ್ಲ.

ಮಾಧ್ಯಮವೇ ಇರಬಹುದು, ಸರ್ಕಾರದ ವಿವಿಧ ಹೈ ವೋಲ್ಟೇಜ್ ಮೀಟಿಂಗ್ಗಳೇ ಇರಬಹುದು, ಎಲ್ಲಾ ಕಡೆ ಮನುಷ್ಯ ಮಾಡಬಹುದಾದ ಪ್ರಯತ್ನಗಳ ಬಗ್ಗೆಯೇ ಚರ್ಚೆಗಳಾಗುತ್ತಿವೆ. ಭಯೋತ್ಪಾದನೆಯ ನಿಗ್ರಹಕ್ಕೆ ಮತ್ತದೇ ಸೈನಿಕರೆಂಬ ಮನುಷ್ಯರನ್ನು ಬಳಸುವುದು ಹೇಗೆ, ಮನುಷ್ಯರೇ ಕಂಡು ಹಿಡಿದಿರುವ ತಂತ್ರಜ್ಞಾನವನ್ನು, ಆಯುಧಗಳನ್ನು ಉಪಯೋಗಿಸುವುದು ಹೇಗೆ, ಶತ್ರುವನ್ನು ಇತರ ಪರ್ಯಾಯ ಮಾರ್ಗಗಳ ಮೂಲಕ ಮಣಿಸುವುದು ಹೇಗೆ ಎಂಬುದನ್ನೇ ಚರ್ಚಿಸುತ್ತಾರೆಯೆ ಹೊರತು ಕಾಯುವವ ಎಲ್ಲಿ ಎಂದು ಯಾರೂ ಕೇಳುವುದಿಲ್ಲ.

ಕೊಂದವರು ಸಹ ಮಸೀದಿಯೋ, ಮೆಕ್ಕಾನೋ ಅಥವಾ ಮತ್ತೇನೋ ದೇವರ ಶಕ್ತಿಯ ಮೇಲೆ ನಂಬಿಕೆ ಇಟ್ಟು ಕೊಲ್ಲದೇ ಇರಬಹುದಿತ್ತು. ಆ ಶಕ್ತಿಯೇ ನಮ್ಮನ್ನು ಕಾಪಾಡುವುದರಿಂದ ಅದರ ಮೇಲೆ ಭಾರ ಹಾಕಿ ಸುಮ್ಮನೆ ಇರಬಹುದಿತ್ತು, ಆದರೆ ಆ ಮನುಷ್ಯರು ಸಹ ದೇವರನ್ನು ನಂಬದೇ ತಮ್ಮ ಬೇಡಿಕೆ ಈಡೇರಿಕೆಗಾಗಿ ತಾವೇ ಬಂದೂಕಿನಿಂದ ಅಮಾಯಕರನ್ನು ಕೊಲ್ಲುತ್ತಾರೆ.

ಇತ್ತ ಕಡೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾ, ಕುಂಭಮೇಳದಲ್ಲಿ ಭಕ್ತಿಯಿಂದ ಮುಳುಗೇಳುತ್ತಾ, ಜಮ್ಮುವಿನ ವೈಷ್ಣವೋದೇವಿಯ ಕೂಗಳತೆಯಲ್ಲಿಯೇ ಅಮಾಯಕ 28 ಜನರು ಬಲಿಯಾದಾಗಲೂ ಆ ದೇವರೇಕೆ ರಕ್ಷಿಸಲಿಲ್ಲ ಎಂದು ಯಾರೂ ಕೇಳುವುದಿಲ್ಲ. ಮತ್ತದೇ ವಿಚಿತ್ರ ತರ್ಕ ಕುತರ್ಕಗಳು. ಇದೆಲ್ಲವೂ ದೇವರ ಆಟ, ಆ ದೇವರೇ ಈ ರೀತಿ ಕೊಲ್ಲುವ, ಕೊಲ್ಲಿಸುವ ಆಟ ಆಡುವುದು ಎನ್ನುತ್ತಾರೆ.

ಹಾಗೆ ಹಿಂಸೆ ಮಾಡುವುದಿದ್ದರೆ ಆತನನ್ನು ಕಾಯುವ ದೇವರೆಂದು ಏಕೆ ಪೂಜಿಸಬೇಕು. ದೇವರದೇ ಈ ಆಟವಾದರೆ ಆ ದೇವರಿಗೆ ನಿಜಕ್ಕೂ ಪ್ರಶ್ನೆ ಮಾಡಬೇಕಲ್ಲವೇ. ಅವರವರ ಕರ್ಮಾನುಸಾರ ಎನ್ನುವುದೇಯಾದರೆ ನಮ್ಮ ಬುದ್ಧಿಶಕ್ತಿಯ, ಶ್ರಮದ ಅಸ್ತಿತ್ವ ಏಕಿರಬೇಕು.

ಇದೆಲ್ಲವೂ ಮನುಷ್ಯರ ಆಟಗಳು. ಆ ದೇವರು ಏನನ್ನು ಒತ್ತಾಯಿಸುವುದಿಲ್ಲ. ಕೆಟ್ಟದ್ದನ್ನು ಮಾಡುವಂತೆ ಯಾವ ದೇವರು ಹೇಳುವುದಿಲ್ಲ. ಇದೆಲ್ಲಾ ಮನುಷ್ಯರದೇ ದುಷ್ಟತನ. ದೇವರನ್ನೇಕೆ ಇದಕ್ಕೆ ಹೊಣೆ ಮಾಡುವಿರಿ ಎಂಬ ಪ್ರಶ್ನೆ ಬಹಳ ಜನ ಕೇಳುತ್ತಾರೆ. ಈ ದುರಂತಗಳಿಗೆ ದೇವರನ್ನಲ್ಲದೆ ಮತ್ತೆ ಯಾರನ್ನು ಪ್ರಶ್ನಿಸಬೇಕು.

ಸರ್ಕಾರಗಳು, ಆಡಳಿತಗಾರರು, ಜನಸಾಮಾನ್ಯರನ್ನು ಸದಾ ಪ್ರಶ್ನಿಸುತ್ತಲೇ ಇರುತ್ತೇವೆ. ಅವರ ಮಿತಿಗಳ ಬಗ್ಗೆಯೂ ನಮಗೆ ಅರಿವಿದೆ. ಅದ್ಯಾವುದನ್ನು ನಾವು ಪೂಜಿಸುವುದು ಇಲ್ಲ, ಸಂಪೂರ್ಣ ನಂಬುವುದೂ ಇಲ್ಲ. ಆದರೆ ದೇವರನ್ನು ಪೂಜಿಸುತ್ತೇವೆ, ಆರಾಧಿಸುತ್ತೇವೆ, ನಂಬುತ್ತೇವೆ. ನಮ್ಮನ್ನು ಕಾಪಾಡಲು ಪ್ರತಿಕ್ಷಣ ಆತನನ್ನು ಧ್ಯಾನಿಸುತ್ತೇವೆ.

ಸರ್ಕಾರಗಳು ವಿಫಲವಾದರೆ ಅದನ್ನು ಬದಲಾಯಿಸುತ್ತೇವೆ. ಆದರೆ ದೇವರನ್ನು ಮಾತ್ರ ಶತಶತಮಾನಗಳಿಂದ ಅದೇ ರೀತಿ, ಅದೇ ನಂಬಿಕೆಯಿಂದ ಉಳಿಸಿಕೊಂಡು ಬರುತ್ತಿದ್ದೇವೆ. ಆದರೆ ಆ ದೇವರು ಮಾತ್ರ ನಮಗೆ ನ್ಯಾಯ ಕೊಡುತ್ತಿಲ್ಲ. ಧರ್ಮವೂ ನ್ಯಾಯ ಕೊಡುತ್ತಿಲ್ಲ. ಈಗ ಅದನ್ನು ಏಕೆ ಪ್ರಶ್ನಿಸಬಾರದು ?

ಕೊಲ್ಲುವ ಆಟದಲ್ಲಿ ಕಾಯುವವ ನಿಜಕ್ಕೂ ಶಕ್ತಿವಂತನೇ ಆಗಿದ್ದರೆ, ಕೊಲ್ಲುವವನನ್ನು ಆ ಕ್ಷಣವೇ ಕಾಯುವವ ಕೊಲ್ಲಬಹುದಲ್ಲವೇ ಅಥವಾ ಕನಿಷ್ಠ ಸಾಯುವವರನ್ನು ರಕ್ಷಿಸಬಹುದಲ್ಲವೇ. ಅಷ್ಟನ್ನೂ ಮಾಡದಿದ್ದರೆ ಕಾಯುವವ ಇರುವುದಾದರೂ ಏತಕ್ಕೆ.

ಎಲ್ಲಿಯವರೆಗೆ ಕಾಯುವವ ಕೊಲ್ಲುವವರ ವಿರುದ್ಧ ಅಧಿಪತ್ಯ ಸ್ಥಾಪಿಸುವುದಿಲ್ಲವೋ ಅಲ್ಲಿಯವರೆಗೂ ಕಾಯುವವನ ಶಕ್ತಿಯನ್ನು, ಅಸ್ತಿತ್ವವನ್ನು ಪ್ರಶ್ನಿಸುತ್ತಲೇ ಇರಬೇಕಲ್ಲವೇ, ಯೋಚಿಸಿ ನೋಡಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *