ಒಂದಲ್ಲ ಎರಡಲ್ಲ ಅವು ಸರಿಸುಮಾರು 5 ಕೋಟಿ ಮೌಲ್ಯದ ಮೊಬೈಲ್‌ಗಳು, ಉತ್ತರ ಪ್ರದೇಶದಿಂದ ಬೆಂಗಳೂರಿಗೆ ರವಾನೆ ಮಾಡ್ತಿದ್ದ ಟ್ರಕ್‌ನಲ್ಲಿ ರಂದ್ರ ಕೊರೆದು ಸಿನಿಮೀಯ ಶೈಲಿಯಲ್ಲಿ ಮೊಬೈಲ್‌ಗಳನ್ನ ಕಳವು ಮಾಡಲಾಗಿತ್ತು. ಪೊಲೀಸರಿಗೆ ಚಾಲೆಂಜಿಂಗ್ ಆಗಿದ್ದ ಪ್ರಕರಣವನ್ನ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ದೇಶದಲ್ಲೇ ಕರ್ನಾಟಕ ಪೊಲೀಸರ ಕಾರ್ಯವೈಖರಿ ಮಾದರಿಯಾಗಿದೆ.
ಹೌದು. 2024ರ ನವೆಂಬರ್ 23ರಂದು ಟ್ರಕ್‌ವೊಂದು ರಾಷ್ಟ್ರೀಯ ಹೆದ್ದಾರಿ-44ರ ಮೂಲಕ ಉತ್ತರಪ್ರದೇಶದ ನೋಯ್ಡಾದಿಂದ ಬೆಂಗಳೂರಿಗೆ ಬರೋಬ್ಬರಿ 6,640 ಮೊಬೈಲ್‌ಗಳನ್ನ ಹೊತ್ತು ಸಾಗಿತ್ತು. ಬೆಂಗಳೂರು ತಲುಪಲು ಇನ್ನೂ 50 ಕಿಮೀ ಮಾತ್ರ ಬಾಕಿಯಿತ್ತು. ಆದ್ರೆ ದಿನ ಕಳೆದರೂ ಬೆಂಗಳೂರು ತಲುಪಲೇ ಇಲ್ಲ. ಹೀಗಾಗಿ ಕಂಪನಿಯವರು ಜಿಪಿಎಸ್ ಆಧರಿಸಿ ಚೆಕ್ ಮಾಡಿದ್ರೆ ಅದು ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿ ಬಳಿ ಡಾಬಾವೊಂದರ ಬಳಿ ನಿಲ್ಲಿಸಲಾಗಿತ್ತು. ಹೋಗಿ ನೋಡಿದ್ರೆ ಟ್ರಕ್ ಇದೆ, ಚಾಲಕ ಇರಲಿಲ್ಲ.
ನಂತರ ಟ್ರಕ್‌ನಲ್ಲಿ ಸರಕು ನೋಡಲು ಹೋದಾಗ ಚಾಲಕನ ಕ್ಯಾಬಿನ್‌ನಿಂದಲೇ ರಂದ್ರ ಕೊರೆದು ಮೊಬೈಲ್‌ಗಳನ್ನ ದೋಚಿ ಮತ್ತೊಂದು ಟ್ರಕ್‌ಗೆ ತುಂಬಿಸಿರುವುದು ಬೆಳಕಿಗೆ ಬಂದಿತು. 6,640 ಮೊಬೈಲ್ ಗಳ ಪೈಕಿ 5,140 ಮೊಬೈಲ್ ಗಳನ್ನ ಕಳವು ಮಾಡಲಾಗಿತ್ತು. ಉಳಿದ ಮೊಬೈಲ್ ಗಳು ಹಾಗೆ ಟ್ರಕ್ ನಲ್ಲಿ ಉಳಿದಿದ್ದವು.
ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೇರೇಸಂದ್ರ ಹಾಗೂ ಸೆನ್ ಪೊಲೀಸರು ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದರು. ಇದೀಗ 7 ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಟ್ರಕ್ ಚಾಲಕ ರಾಹುಲ್, ಇಮ್ರಾನ್, ಮೊಹಮ್ಮದ್ ಮುಸ್ತಫಾ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ ಹಾಗೂ ಯೂಸುಫ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ ಮೊಬೈಲ್ ಸಾಗಾಟ ಮಾಡಲು ಬಳಸಿದ್ದ ಟ್ರಕ್ ಸೇರಿ ಕಳವು ಮಾಡಿದ್ದ 5,140 ಮೊಬೈಲ್‌ಗಳ ಪೈಕಿ 56 ಮೊಬೈಲ್‌ಗಳನ್ನ ಜಪ್ತಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಸಮೀಪ ಮೊಬೈಲ್ ದೋಚಿದ್ದ ಕಳ್ಳರು ಬೇರೊಂದು ಟ್ರಕ್‌ಗೆ ತುಂಬಿಕೊಂಡು ದೆಹಲಿಯಲ್ಲಿ ಮಾರಾಟ ಮಾಡಿದ್ದರು. ಸರಿಸುಮಾರು ನಾಲ್ಕೂವರೆ ಕೋಟಿ ಮೌಲ್ಯದ ಮೊಬೈಲ್‌ಗಳನ್ನ ಕಳ್ಳರು ಕೇವಲ 90 ಲಕ್ಷ ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದರು. ಅಲ್ಲಿಂದ ಮೊಬೈಲ್‌ಗಳು ದೇಶದ ನಾನಾ ರಾಜ್ಯಗಳಿಗೆ ಸಪ್ಲೈ ಆಗಿವೆ ಅನ್ನೋದು ತನಿಖೆ ವೇಳೆ ತಿಳಿದುಬಂದಿದೆ. ಹೀಗಾಗಿ ಮೊಬೈಲ್ ಮಾರಿ ಆರೋಪಿಗಳ ಖಾತೆಯಲ್ಲಿದ್ದ ಉಳಿದಿದ್ದ 20 ಲಕ್ಷ ರೂ. ನಗದನ್ನು ಸೀಜ್ ಮಾಡಿಕೊಳ್ಳಲಾಗಿದೆ.
ಆರೋಪಿಗಳು ಪ್ರತಿ ರಾಜ್ಯಗಳಲ್ಲಿ 300 ರಿಂದ 400 ಮೊಬೈಲ್ಗಳನ್ನು ಮಾರಾಟ ಮಾಡಿದ್ದು, IMEI ನಂಬರ್ ಆಧಾರದ ಮೇಲೆ ಮೊಬೈಲ್‌ಗಳನ್ನ ಬ್ಲಾಕ್ ಮಾಡಲಾಗುತ್ತಿದೆ.
ಅಲ್ಲದೇ ಪ್ರಕರಣದಲ್ಲಿನ ಪ್ರಮುಖ ಆರೋಪಿಗಳು 2 ವರ್ಷಗಳ ಹಿಂದೆ ಬಂಗಾಳದಲ್ಲಿ ನಡೆದಿರೋ 9 ಕೋಟಿಯ ಐಫೋನ್ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಚಿಕ್ಕಬಳ್ಳಾಪುರ ಪೊಲೀಸರಿಂದ ಪ. ಬಂಗಾಳ ಪೊಲೀಸರು ಬಾಡಿ ವಾರೆಂಟ್ ಮೇಲೆ ಪಡೆದುಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.