ರಾಯಚೂರು: ಬೇರೆ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಪಾಪಿ ತಂದೆಯೊಬ್ಬ ಹೆತ್ತ ಮಗಳನ್ನೇ ಕೊಲೆ ಮಾಡಿ ಶವವನ್ನು ನದಿಗೆ ಎಸೆದಂತಹ ಶಾಕಿಂಗ್ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
2024ರ ಸೆಪ್ಟೆಂಬರ್ 29ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.
ಲಕ್ಕಪ್ಪ ಕಂಬಳಿ ಪುತ್ರಿಯನ್ನು ಕೊಲೆ ಮಾಡಿದ ಆರೋಪಿಯಾದರೆ ರೇಣುಕಾ (18) ಕೊಲೆಯಾದ ಮಗಳು.
ಗ್ರಾಮದ ಅನ್ಯ ಜಾತಿಯ ಯುವಕ ಹನುಮಂತನನ್ನು ರೇಣುಕಾ ಪ್ರೀತಿಸಿದ್ದಳು. ಮದುವೆಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಇಬ್ಬರೂ ಓಡಿಹೋಗಿದ್ದರು. ಆಗ ರೇಣುಕಾಗೆ 17 ವರ್ಷವಾಗಿದ್ದು, ಅಪ್ರಾಪ್ತ ವಯಸ್ಕಳಾಗಿದ್ದರಿಂದ ಆಕೆಯ ತಂದೆ ಲಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ ಹನುಮಂತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು.
ಪೋಕ್ಸೋ ಪ್ರಕರಣದಡಿ ಆರೋಪಿಯಾಗಿದ್ದ ಹನುಮಂತನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದರೆ ಇತ್ತ ರೇಣುಕಾ ಅದೇ ಹುಡುಗನನ್ನು ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು. ಇದಾದ ಕೆಲ ದಿನಗಳ ಬಳಿಕ ಹನುಮಂತ ಜಾಮೀನಿನ ಮೇಲೆ ಹೊರಬಂದಿದ್ದ. ಹೀಗಾಗಿ ರೇಣುಕಾ ಮತ್ತೆ ಹನುಮಂತನೊಂದಿಗೆ ಓಡಾಡುವುದನ್ನು ಪ್ರಾರಂಭಿಸಿದ್ದಳು.
ರೇಣುಕಾಗೆ ತಂದೆ ಎಷ್ಟೇ ಬುದ್ದಿ ಹೇಳಿದರೂ ಹನುಮಂತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದರಿಂದ ಕೋಪಗೊಂಡ ಲಕ್ಕಪ್ಪ ಮಗಳನ್ನು ಕೊಲೆ ಮಾಡಿ, ಶವವನ್ನು ಮೂಟೆ ಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದಾನೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ ಲಕ್ಕಪ್ಪ ತಪ್ಪೊಪ್ಪಿಗೆ ಮಾಡಿದ್ದಾರೆ.