ಮೇ.5 ರಿಂದ ಪ.ಜಾತಿ ಒಳಮೀಸಲಾತಿ ಸಮೀಕ್ಷೆ: ಸಮೀಕ್ಷೆ ವೇಳೆ ಎಲ್ಲರೂ ನಿರ್ದಿಷ್ಟವಾಗಿ ‘ಮಾದಿಗ’ ಎಂದೇ ಬರೆಸಬೇಕು- ಪಾಲನಹಳ್ಳಿ ಮಠದ ಡಾ.ಸಿದ್ದರಾಜ ಸ್ವಾಮೀಜಿ

ದೊಡ್ಡಬಳ್ಳಾಪುರ: ಮೇ 5 ರಿಂದ 17ರವರೆಗೆ ಮನೆ ಮನೆಗೆ ಭೇಟಿ ನೀಡಿ ನಡೆಸಲಿರುವ ಒಳಮೀಸಲಾತಿ ಸಮೀಕ್ಷೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲರೂ ಕಡ್ಡಾಯವಾಗಿ ಮಾದಿಗರು ಎಂದು ನಮೂದಿಸುವ ಮೂಲಕ ನಮ್ಮ ಸಂವಿಧಾನ ಬದ್ಧವಾದ ಹಕ್ಕನ್ನು ಪಡೆಯಲು ಜಾಗೃತರಾಗಬೇಕು ಎಂದು ಪಾಲನಹಳ್ಳಿ ಮಠದ ಸಿದ್ದರಾಜಸ್ವಾಮೀಜಿ ಹೇಳಿದರು.

ನಗರದ ಡಾ.ಬಾಬು ಜಗಜೀವನ್ ರಾಂ ಭವನದಲ್ಲಿ ಸೋಮವಾರ ನಡೆದ ಕರ್ನಾಟಕ ಮಾದಾರ ಮಹಾಸಭಾ ವತಿಯಿಂದ ಬೂತ್ ಮಟ್ಟದ ಜನ ಜಾಗೃತಿ ಸಭೆಯಲ್ಲಿ ಮಾತನಾಡಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮಾದಿಗ ಸಮುದಾಯ ಸಾಕಷ್ಟು ಅವಕಾಶ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸಲು ಹಲವಾರು ವರ್ಷಗಳ ಅವಿರತ ಹೋರಾಟದ ಫಲವಾಗಿ ಈಗ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎಸ್.ನಾಗಮೋಹನದಾಸ್ ಅವರ ನೇತೃತ್ವದಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಒಳಮೀಸಲಾತಿ ಕಲ್ಪಿಸಲು ಮುಂದಾಗಿದೆ ಎಂದರು.

ಮಾದಿಗ ಸಮುದಾಯ ಈ ಹಿಂದಿನ ಸಮೀಕ್ಷೆಗಳ ಸಂದರ್ಭದಲ್ಲಿ ಮಾಡಿರುವ ತಪ್ಪುಗಳನ್ನು ಈಗಲೂ ಸಹ ಮಾಡದೇ ನಿರ್ಧಿಷ್ಟವಾಗಿ ತಮ್ಮ ಜಾತಿಯನ್ನು ನಿಖರವಾಗಿ ಬರೆಸಬೇಕು. ಇದರಿಂದ ಮಾದಿಗ ಸಮುದಾಯಕ್ಕೆ ನ್ಯಾಯಬದ್ಧವಾಗಿ ದೊರೆಯಬೇಕಿರುವ ಸರ್ಕಾರದ ಸವಲತ್ತುಗಳು ಹಾಗೂ ರಾಜಕೀಯ ಪ್ರಾತಿನಿದ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದರು.

ಕರ್ನಾಟಕ ಮಾದಾರ ಮಹಾಸಭಾ ತಾಲ್ಲೂಕು ಮುಂಖಡರಾದ ದೊಡ್ಡತುಮಕೂರು ಸಿ.ರಾಮಕೃಷ್ಣಪ್ಪ ಮಾತನಾಡಿ, ಒಳಮೀಸಲಾತಿ ಕಲ್ಪಿಸಲು ನಡೆಸಲಾಗುತ್ತಿರುವ ಸಮೀಕ್ಷಯಿಂದ ಯಾರೊಬ್ಬರು ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಮೂರು ಹಂತಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಮೇ 5 ರಿಂದ 17ರವರೆಗೆ ಮನೆ ಮನೆ ಸಮೀಕ್ಷೆ, ಮೇ 19 ರಿಂದ ಮತಗಟ್ಟೆ ಹಂತದಲ್ಲಿ ಮೂರು ದಿನಗಳ ಕಾಲ ಶಿಬಿರಗಳನ್ನು ನಡೆಸಲಾಗುತ್ತಿದೆ. ಮೂರನೇ ಹಂತದಲ್ಲಿ ಸ್ವಯಂ ಘೋಷಿತವಾಗಿ ಅಗತ್ಯ ದಾಖಲೆಗಳೊಂದಿಗೆ ಆನ್ ಲೈನ್ ಮೂಲಕವು ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಅವಕಾಶ ನೀಡಲಾಗಿದೆ. ಮಾದಿಗ ಸಮುದಾಯ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಎಕೆ, ಎಡಿ, ಆದಿಡ್ರಾವಿಡ ಮುಂತಾದ ಹೆಸರುಗಳಿಂದ ಬರೆಸಲಾಗಿದೆ. ಪರಿಶಿಷ್ಟರಲ್ಲಿನ 101 ಜಾತಿಗಳು ಈಗ ನಡೆಸಲಾಗುತ್ತಿರುವ ಸಮೀಕ್ಷೆ ಸಂದರ್ಭದಲ್ಲಿ ಎಲ್ಲರೂ ನಿರ್ಧಿಷ್ಟವಾಗಿ ‘ಮಾದಿಗ’ ಎಂದೇ ಬರೆಸಬೇಕು. ಆಗ ಮಾತ್ರ ನಮ್ಮ ಹೋರಾಟಕ್ಕೆ ಜಯ ದೊರೆಯಲಿದೆ ಮತ್ತು ಒಳಮೀಸಲಾತಿ ಪಡೆಯಲು ಸಹಕಾರಿಯಾಗಲಿದೆ. ಮಾದಿಗ ಸಮುದಾಯದ ಪ್ರತಿಯೊಬ್ಬರು ತಮ್ಮ ಗ್ರಾಮಗಳು ಸೇರಿದಂತೆ ಸುತ್ತಮುತ್ತಲು ಪ್ರಚಾರಗಳನ್ನು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಸೂಚಿಸಿದರು.

ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗೆ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗಿದ್ದು, ಮೊದಲ ಹಂತದಲ್ಲಿ ಮೇ 5 ರಿಂದ 17 ವರೆಗೆ ಗಣತಿದಾರರು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳುವರು. ಎರಡನೇ ಹಂತದಲ್ಲಿ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವರು. ಮೂರನೇ ಹಂತದಲ್ಲಿ ಮೇ 19 ರಿಂದ 23 ರ ವರೆಗೆ ಆನ್ಲೈನ್ ಮೂಲಕ ಸ್ವಯಂ ಘೋಷಣೆ ಮಾಡಬಹುದಾಗಿದೆ ಎಂದರು.

ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ಎಂ ಹನುಮಯ್ಯ, ಬಚ್ಚಳ್ಳಿ ನಾಗರಾಜು, ಮುನಿಸುಬ್ಬಯ್ಯ, ಪುರುಷೋತ್ತಮ್, ಶಿವಣ್ಣ, ಟಿ.ಡಿ.ಮುನಿಯಪ್ಪ, ವಿ.ವೆಂಕಟೇಶ್, ರಾಜಘಟ್ಟ ಕಾಂತರಾಜು, ವೆಂಕಟರಮಣಪ್ಪ, ತಳವಾರನಾಗರಾಜು. ಆರ್.ವಿ.ಮಹೇಶ್, ನೆರಳಘಟ್ಟ ರಾಮು, ಹರ್ಷ ಹಾದ್ರಿಪುರ, ಮುತ್ತುರಾಜು ಸೂಲಕುಂಟೆ, ಕುಂಬಾರಪೇಟೆ ನಾರಾಯಣಪ್ಪ, ಟಿ.ಹನುಮಂತಯ್ಯ, ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಮುನಿರಾಜು, ಕೆ.ವಿ.ಮುನಿಯಪ್ಪ, ಎನ್.ಎಂ.ನರಸಿಂಹಮೂರ್ತಿ, ದಾಳಪ್ಪ, ಮುನಿಯಪ್ಪ, ಮುನಿರಾಜು, ದೊಡ್ಡಯ್ಯ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *