ಮುಂಬೈ: ಶುದ್ಧ ಕುಡಿಯುವ ನೀರಿಗಾಗಿ ಮಹಿಳೆಯೊಬ್ಬರು ಬಹುತೇಕ ಬತ್ತಿಹೋಗಿರುವ ನೂರಾರು ಅಡಿಗಳ ಆಳವಾದ ಬಾವಿಗೆ ಇಳಿದು ತಮ್ಮ ಪ್ರಾಣವನ್ನು ಸಹ ಲೆಕ್ಕಿಸದೇ ನೀರು ತರುತ್ತಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರ ಬಳಿಯ ಮೆಟ್ರ್ ಹಳ್ಳಿಯಲ್ಲಿ ನಡೆದಿದೆ. ಸದ್ಯ ಈ ವೀಡಿಯೋ ಫುಲ್ ವೈರಲ್ ಆಗುತ್ತಿದೆ.
ಬಾವಿಯಲ್ಲಿ ಅಳವಡಿಸಿರುವ ಚಿಕ್ಕ ಚಿಕ್ಕ ಕಲ್ಲುಗಳ ಸಹಾಯದಿಂದ ಆಳವಾಗಿರುವ ಬಾವಿಗೆ ಇಳಿದ ಮಹಿಳೆ ಒಂದು ಬಿಳಿಯ ಬಣ್ಣದ ಬಕೆಟ್ಗೆ ಹಗ್ಗ ಕಟ್ಟಿ ಜೋತು ಬಿಟ್ಟಿದ್ದು ನೀರಿಗಾಗಿ ಬವಣೆ ಪಡುತ್ತಿದ್ದಾರೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ, ಭಾರತದ ಅನೇಕ ಭಾಗಗಳು ಬರ ಮತ್ತು ಶಾಖದ ಪರಿಸ್ಥಿತಿಗಳಲ್ಲಿ ತತ್ತರಿಸಿದಾಗ, ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಮಹಿಳೆಯರು ತಮ್ಮ ಕುಟುಂಬಗಳಿಗೆ ನೀರು ತರಲು ತಮ್ಮ ಜೀವವನ್ನು ಪಣಕ್ಕಿಡಬೇಕಾಗುತ್ತದೆ.
ಸದ್ಯ ದೇಶದಲ್ಲಿ ಬೇಸಿಗೆಯ ಸಂದರ್ಭದಲ್ಲಿ ಜನರು ನೀರಿಗಾಗಿ ಯಾವ ರೀತಿ ಬವಣೆ ಪಡುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ನೈಜ ನಿದರ್ಶನ ಆಗಿದೆ.