ನವ ದೊಡ್ಡಬಳ್ಳಾಪುರ ನಿರ್ಮಾಣ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಶಾಸಕ ಒಂದೇ ವರ್ಷದಲ್ಲಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಂಪನಿಯ ಬಿಬಿಎಂಪಿ ಕಸವಿಲೇವಾರಿ ಘಟಕ ಮುಚ್ಚಿಸಲಾಗುವುದು ಎಂದು ಹೇಳುತ್ತಿದ್ದರು. ಈ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಕ್ಷೇತ್ರದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದ್ದರು. ಇದಕ್ಕೆ ಹಾಲಿ ಶಾಸಕ ಧೀರಜ್ ಮುನಿರಾಜ್ ಪ್ರತಿಕ್ರಿಯಿಸಿ, ಎಂಎಲ್ ಎ, ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. 2024ರ ಡಿ.11ರಂದು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಆದೇಶ ಪತ್ರವನ್ನು ಎಲ್ಲರಿಗೂ ನೀಡಿದ್ದೇನೆ. ಸರ್ಕಾರ ನಮ್ಮದು ಇದ್ದಿದ್ರೆ ಆರು ತಿಂಗಳಲ್ಲಿ ಎಲ್ಲವನ್ನು ಸ್ಥಗಿತಗೊಳಿಸುತ್ತಿದ್ದೇವು. ಆದರೆ ಏನು ಮಾಡೋದು ಸರ್ಕಾರ ನಮ್ಮದಲ್ಲ. ಟೆರ್ರಾ ಫಾರ್ಮ್ ಕಸ ವಿಲೇವಾರಿ ಘಟಕ ಸ್ಥಾಪನೆಗೂ ಬಿಡೋದಿಲ್ಲ. ನಮ್ಮ ತಾಲೂಕಿನಲ್ಲಿ ಕಸ ಹಾಕಿದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ನ್ಯಾಯಾಲಯದ ಮೊರೆ ಹೋಗುತ್ತೇವೆ, ಹೋರಾಟ ಕೈಗೊಳ್ಳುತ್ತೇವೆ. ಹೊಸದಾಗಿ ಕಸ ಹಾಕೋದನ್ನು ನಿಲ್ಲಿಸುತ್ತೇವೆ ಎಂದರು.
ನಗರಸಭೆ ವ್ಯಾಪ್ತಿಯ 13ನೇ ವಾರ್ಡ್ ಭುವನೇಶ್ವರಿ ನಗರದಲ್ಲಿ ಇ-ಖಾತಾ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಿಪೋರ್ಟ್ ಕಾರ್ಡ್ ಮೂಲಕ ಮಾತಾಡುತ್ತೇನೆ…
ನಾನು ಜನರಿಂದ ಆಯ್ಕೆಯಾಗಿರುವುದು ಐದು ವರ್ಷಕ್ಕೆ. ಐದು ವರ್ಷದ ಅಧಿಕಾರ ಅವಧಿಯಲ್ಲಿ ಹಂತ ಹಂತವಾಗಿ ತಾಲೂಕಿನ ಅಭಿವೃದ್ಧಿ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ನಾನು ರಾಜಕಾರಣದಲ್ಲಿ ಇನ್ನೊಬ್ಬರನ್ನ ತೆಗಳಿ, ದೂಷಿಸಿ, ಆರೋಪಿಸಿ ಮಾತನಾಡೋದಿಲ್ಲ. ಇನ್ನೊಬ್ಬರನ್ನ ನಂಬಿ ಕೂಡ ರಾಜಕಾರಣ ಮಾಡೋದಿಲ್ಲ. ನನ್ನನ್ನು ನಾನು ನಂಬಿ, ಅಭಿವೃದ್ಧಿ ನಂಬಿಕೊಂಡು ರಾಜಕಾರಣ ಮಾಡುತ್ತೇನೆ. ಐದು ವರ್ಷದ ನಂತರ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಮಾತಾಡುತ್ತೇನೆ ಎಂದರು.
ತಾಲೂಕಿಗೆ ಆಗಿದ್ದ ಜಿಲ್ಲಾಸ್ಪತ್ರೆ ತಪ್ಪಿಸುವ ಯತ್ನ ನಡೆಸಿದ್ದು ಯಾರು..?
ನಮಗೆ ಆಗಿರೋ ಜಿಲ್ಲಾಸ್ಪತ್ರೆಯನ್ನು ತಪ್ಪಿಸುವ ಯತ್ನ ನಡೆಸಿದ್ದು ಯಾರು..? ದಯವಿಟ್ಟು ತಾಲೂಕಿನಲ್ಲಿ ಜಿಲ್ಲಾಸ್ಪತ್ರೆ ಆಗೋದನ್ನ ತಡಿಬೇಡಿ. ಬೇಕಾದರೆ ನಿಮ್ಮ ಹೆಸರೇ ಇಡುತ್ತೇನೆ. ಜಿಲ್ಲಾ ಕ್ರೀಡಾಂಗಣ ನಾನು ಮಾಡಿಸಿದ್ದು ಅಂತಾರೆ, 2024ರಲ್ಲಿ ಜಿಲ್ಲಾ ಕ್ರೀಡಾಂಗಣ ಮಂಜೂರಾಗಿರುವುದು. ಆವಾಗ ಎಂಎಲ್ ಎ ಯಾರು ಆಗಿದ್ರು…?, ಹತ್ತು ವರ್ಷ ಎಂಎಲ್ ಎ ಆಗಿದ್ರು, ಆ ಅವಧಿಯಲ್ಲಿ ಎಷ್ಟು ಗ್ರಾಂಟ್ ಹಾಕಿಸಿದ್ದೀರಿ…? ಹಿಂಗೆ ಕೇಳಿದ್ರೆ ಕಾಂಗ್ರೆಸ್ ಅಂತಾರೆ. ಹಾಂಗೆ ಹೇಳಿದ್ರೆ ಬಿಜೆಪಿ ಅಂತಾರೆ. ಸರ್ಕಾರ ಅನುದಾನ ಕೊಟ್ಟರೆ ತಾನೆ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಆಗೋದು. ನಾವು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಯಾವುತ್ತೂ ಮಾಡೋದಿಲ್ಲ.
ಮಾಜಿ ಶಾಸಕರು ತಾಲೂಕಿಗೆ ಎಷ್ಟು ಅನುದಾನ ತಂದಿದ್ದಾರೆ…?
ಹಾಲಿ ಎಂಎಲ್ ಎ ತಾಲೂಕಿಗೆ ಅನುದಾನ ತಂದು ಅಭಿವೃದ್ಧಿ ಮಾಡುತ್ತಿಲ್ಲ ಎಂದು ಮಾಜಿ ಎಂಎಲ್ ಎ ಆರೋಪಿಸಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲು ಆರೋಪ ಮಾಡಿದವರು ಎಷ್ಟು ಅನುದಾನ ತಂದು ತಾಲೂಕಿನ ಅಭಿವೃದ್ಧಿ ಮಾಡಿದ್ದಾರೆ. ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಪಬ್ಲಿಕ್ ಡೊಮೈನ್ ಗೆ ಬಿಡೋದಕ್ಕೆ ಹೇಳಿ, ನಾನು ಎಷ್ಟು ಅನುದಾನ ತಂದಿದ್ದೇನೆ ಎಂದು ತೋರಿಸುತ್ತೇನೆ. ಆಗ ಯಾರು ಹೆಚ್ಚು ಅನುದಾನ ತಂದಿದ್ದಾರೆ ಎಂಬುದು ಜನ ತೀರ್ಮಾನ ಮಾಡುತ್ತಾರೆ.
ಬಿ.ಸಿ.ಆನಂದ್ ಅವರೇ ಬಮೂಲ್ ನಿರ್ದೇಶಕರಾಗುತ್ತಾರೆ…
ಬಿ.ಸಿ.ಆನಂದ್ ಅವರೇ ಬಮೂಲ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ನಿರ್ದೇಶಕರಾಗುತ್ತಾರೆ. ಬಿ.ಸಿ.ಆನಂದ್ ಅವರನ್ನು ಹುಸ್ಕೂರ್ ಆನಂದ್ ಅವರೇ ಬಮೂಲ್ ನಿರ್ದೇಶಕರನ್ನಾಗಿ ಮಾಡುತ್ತಾರೆ. ದೊಡ್ಡವರು ಹೇಳಿದಾಗೆ ಕೇಳೋದು ಶಾಸಕನಾಗಿ ನನ್ನ ಕೆಲಸವಷ್ಟೆ ಎಂದರು.
ಜಾತಿ ಗಣತಿ ಅವೈಜ್ಞಾನಿಕವಾಗಿದೆ….
ಜಾತಿ ಗಣತಿ ಅವೈಜ್ಞಾನಿಕವಾಗಿದೆ. 50 ದಿನದಲ್ಲಿ 5 ಕೋಟಿ 98 ಲಕ್ಷನ ಹೇಗೆ ಸಮೀಕ್ಷೆ ಮಾಡಿದರು. ಸೋಷಿಯೋ ಎಕನಾಮಿಕ್ ಸರ್ವೇ ಹೇಗೆ ಮಾಡಬೇಕು. ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಸರ್ವೇ ಮಾಡಬೇಕು. ಆದರೆ ಈ ಸರ್ವೇಯನ್ನು ಸೂಕ್ತ ರೀತಿಯಲ್ಲಿ ಮಾಡಿಲ್ಲ. ಆದ್ದರಿಂದ ಜಾತಿ ಗಣತಿ ಅವೈಜ್ಞಾನಿಕವಾಗಿದೆ ಎಂದರು.