ದೊಡ್ಡಬಳ್ಳಾಪುರದಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ನಡೆದ ಶೋಭಾಯಾತ್ರೆಯಲ್ಲಿ ಇತರೆ ಎಲ್ಲಾ ಪ್ರತಿಮೆಗಳಿಗಿಂತಲೂ ಚಿಕ್ಕದಾಗಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಯನ್ನು ಬಳಸುವ ಮೂಲಕ ಅವಮಾನಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಮುಖಂಡ ಜಿ.ಲಕ್ಷ್ಮೀಪತಿ, ಶೋಭಾಯಾತ್ರೆಗೆ ನಮ್ಮ ವಿರೋಧವಿಲ್ಲ. ಶೋಭಾಯಾತ್ರೆಯಲ್ಲಿ ರಾಮ, ಆಂಜನೇಯ, ಶಿವ ಪ್ರತಿಮೆಗಳ ಜೊತೆ ಅಂಬೇಡ್ಕರ್ ಪ್ರತಿಮೆಯನ್ನು ಮೆರವಣಿಗೆ ಮಾಡಲಾಯಿತು. ಇದಕ್ಕೆ ನಮ್ಮ ತಂಟೆ ತಕರಾರು ಇಲ್ಲ. ಆದರೆ, ಶಿವ, ಶ್ರೀರಾಮ, ಆಂಜನೇಯ ಪ್ರತಿಮೆಗಳು ದೊಡ್ಡದಾಗಿದ್ದು, ಅಂಬೇಡ್ಕರ್ ಪ್ರತಿಮೆ ಮಾತ್ರ ಚಿಕ್ಕದಾಗಿದೆ. ಎಲ್ಲಾ ಪ್ರತಿಮೆಗಳಿಗಿಂತಲೂ ಚಿಕ್ಕದಾಗಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಯನ್ನು ಬಳಸುವ ಮೂಲಕ ಅವಮಾನಿಸಲಾಗಿದ್ದು, ಇದಕ್ಕೆ ನಮ್ಮ ವಿರೋಧವಿದೆ. ಕೂಡಲೇ ಇದಕ್ಕೆ ಸಂಬಂಧಪಟ್ಟವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಶೋಭಾಯಾತ್ರೆಯಲ್ಲಿ ಇತ್ತೀಚೆಗಷ್ಟೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಬಳಸಲಾಗುತ್ತಿದೆ. ಇದೂವರೆಗೂ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇಲ್ಲ. ಇದೀಗ ಇದ್ದಕ್ಕಿದ್ದಾಗೆ ಅಂಬೇಡ್ಕರ್ ಅವರ ಬಗ್ಗೆ ಜ್ಞಾನೋದಯವಾಗಿದೆ. ರಾಮಮಂದಿರ ವಿಚಾರ ಮುಗಿದ ಮೇಲೆ ವೋಟ್ ಬ್ಯಾಂಕ್ ಗಾಗಿ ಅಂಬೇಡ್ಕರ್ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ತುಳಿತಕ್ಕೊಳಗಾದವರನ್ನು ಸಂವಿಧಾನ ಮೂಲಕ ಮೇಲಕ್ಕೆತ್ತಿದ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರೇ ನಮಗೆ ದೇವರು. ನಾವು ಅಂಬೇಡ್ಕರ್ ಅವರನ್ನು ದೇವರೆಂದೇ ಭಾವಿಸಿ ಪೂಜೆ ಮಾಡುತ್ತೇವೆ. ನಾವು ಪೂಜೆ ಮಾಡುವ ದೇವರನ್ನು ಮತಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ನಂತರ ಎಲ್ಲಾ ಮುಖಂಡರು ಸೇರಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು.
ಈ ವೇಳೆ ದಲಿತ ಹಾಗೂ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.