ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ 5 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2021 ವಿದ್ಯಾರ್ಥಿಗಳು ಏಪ್ರಿಲ್ 16 ಮತ್ತು 17 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ( ಸಿಇಟಿ) ಬರೆಯಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಎನ್.ಮೋಹನ್ ಕುಮಾರ್ ತಿಳಿಸಿದ್ದಾರೆ.
ಅವರು ಸಿಇಟಿ ಪರೀಕ್ಷೆಯ ಪೂರ್ವ ಸಿದ್ಧತೆ ಕುರಿತು ಮಾಹಿತಿ ನೀಡಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಕೊಂಗಾಡಿಯಪ್ಪ ಪದವಿಪೂರ್ವ ಕಾಲೇಜಿನಲ್ಲಿ 688, ಮಾದಗೊಂಡನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 432, ಹೊಸ ಬಸ್ ನಿಲ್ದಾಣ ಮುಂಭಾಗದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ 360, ವಿದ್ಯಾನಿಧಿ ಸ್ವತಂತ್ರ್ಯ ಪದವಿಪೂರ್ವ ಕಾಲೇಜಿನಲ್ಲಿ 270, ಶ್ರೀ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ 271 ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ನಡೆಯುತ್ತದೆ ಎಂದರು.
ಏ.16 ರಂದು ಬುಧವಾರ ಬೆಳಗ್ಗೆ 10.30 ರಿಂದ 11.50ರ ವರೆಗೆ ಭೌತವಿಜ್ಞಾನ, ಮಧ್ಯಾಹ್ನ 2.30 ರಿಂದ 3.50ರವರೆಗೆ ರಸಾಯನವಿಜ್ಞಾನ
ಏ.17 ರಂದು ಗುರುವಾರ ಬೆಳಿಗ್ಗೆ 10.30 ರಿಂದ 11.50ರ ವರೆಗೆ ಗಣಿತ, ಮಧ್ಯಾಹ್ನ 2.30 ರಿಂದ 3.50ರ ವರೆಗೆ ಜೀವವಿಜ್ಞಾನ ಪರೀಕ್ಷೆಗಳು ದೊಡ್ಡಬಳ್ಳಾಪುರ ನಗರದ 5 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯುತ್ತದೆ ಎಂದರು.
ವೆಬ್ ಕಾಸ್ಟಿಂಗ್
ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಸಿಇಟಿ ಪರೀಕ್ಷೆಯ 5 ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಕಡ್ಡಾಯವಾಗಿದೆ. ಯಾವುದೇ ಲೋಪಗಳು ಉಂಟಾಗದಂತೆ ಪರೀಕ್ಷೆಗಳು ಸುಗಮವಾಗಿ ನಡೆಸಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ.
ಸಿಇಟಿ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್‌ವರೆಗೆ ನಿಷೇಧಾಜ್ಞೆ ಜಾರಿ ಇರುತ್ತದೆ. ಝೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಬಂದೋಬಸ್ತ್ ಸೇರಿದಂತೆ ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಮೂಲ ಸೌಕರ್ಯಗಳ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.