ಜಗತ್ತಿನ ಜ್ಞಾನದ ಬೆಳಕು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಗಿದ್ದಾರೆ. ಅವರಿಂದ ಭಾರತ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಸಾಧ್ಯವಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ತಿಳಿಸಿದರು.
ದೊಡ್ಡಬಳ್ಳಾಪುರ ನಗರದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಾಲಯದಲ್ಲಿ ನಡೆದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಸ್ವಾತಂತ್ರ್ಯ ಮತ್ತು ಸಮಾನತೆಯೊಂದಿಗೆ ಬದುಕಲು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿಕೊಟ್ಟ ಸಂವಿಧಾನ ಕಾರಣವಾಗಿದೆ. ಅಂಬೇಡ್ಕರ್ ಅವರ ಅವಿರತ ಪರಿಶ್ರಮ ಮತ್ತು ಹೋರಾಟದ ಫಲವಾಗಿ ಸಾಮಾಜಿಕ ಸುಧಾರಣೆ ಸಾಧ್ಯವಾಯಿತು. ಅಂಬೇಡ್ಕರ್ ರವರು ನೀಡಿರುವ ವಿಚಾರಧಾರೆಗಳು ಇಂದಿಗೂ ಸಹ ಪ್ರಸ್ತುತವಾಗಿವೆ. ಅವರ ವಿಚಾರಧಾರೆಗಳನ್ನು ಜಾರಿಗೊಳಿಸುವ ಮೂಲಕ ಭಾರತವನ್ನು ಮತ್ತಷ್ಟು ಸದೃಢವಾಗಿ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಸಿ.ಅಣ್ಣಯ್ಯ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ಸುಧಾರಣೆಗೆ ಜನಸಾಮಾನ್ಯರಿಗೆ ಶಿಕ್ಷಣ ನೀಡುವುದರಿಂದ ಮಾತ್ರ ಸಾಮಾಜಿಕ ವಿಮೋಚನೆ ಸಾಧ್ಯವೆಂದು ಪ್ರತಿಪಾದಿಸಿದರು. ಶಾಲೆಗಳು, ಕಾಲೇಜುಗಳು, ಹಾಸ್ಟೆಲ್‌ಗಳು ಹೆಚ್ಚು ಹೆಚ್ಚು ಪ್ರಾರಂಭಿಸುವ ಮೂಲಕ ಸರ್ವರಿಗೂ ಶಿಕ್ಷಣ ದೊರೆಯಬೇಕು. ಶಿಕ್ಷಣದ ಕುರಿತು ಅಂಬೇಡ್ಕರ್ ಅವರ ದೃಷ್ಟಿಕೋನ ಅನನ್ಯವಾದದ್ದು. ಶಿಕ್ಷಣದಿಂದ ದೇಶದ ಪ್ರಗತಿಯ ಸಾಧ್ಯವೆಂದು ಹೇಳುವ ಮೂಲಕ ಶಿಕ್ಷಣದ ಮಹತ್ವವನ್ನು ಜಗತ್ತಿಗೆ ತಿಳಿಸಿದರು.
ನಿವೃತ್ತ ಮುಖ್ಯಶಿಕ್ಷಕ ಕೆ.ವಿ.ವೆಂಕಟರೆಡ್ಡಿ ಮಾತನಾಡಿ, ಭಾರತದ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸುವ ಮೂಲಕ ನಾವು ಅವರ ಜನ್ಮ ದಿನಾಚರಣೆಯನ್ನು ಆಚರಿಸಬೇಕಾಗಿದೆ. ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ. ಅಂಬೇಡ್ಕರ್ ಅವರ ವಿಶೇಷ ಬದ್ಧತೆ ಮತ್ತು ವಿದ್ವತ್ತುಗಳಿಂದಾಗಿಯೇ ಭಾರತ ಸಂವಿಧಾನವು ಶ್ರೇಷ್ಠ ಸಂವಿಧಾನ ಎಂದು ಹೆಸರು ಮಾಡಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಸಾಸಲು ಹೋಬಳಿ ಕಸಾಪ ಅಧ್ಯಕ್ಷ ಜಿ.ಎಂ.ನಾಗರಾಜು, ಕಸಬಾ ಹೋಬಳಿ ಕಸಾಪ ಅಧ್ಯಕ್ಷ ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿಗಳಾದ ಸಫೀರ್ ಅಹಮದ್, ನಾಗರತ್ನಮ್ಮ, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಶಿಕ್ಷಕರುಗಳಾದ ಕೋದಂಡರಾಮ್, ನಾಗೇಶ್, ಗಣೇಶ್, ಕಲಾವಿದರಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ರಾಮಕೃಷ್ಣ, ಮುನಿರತ್ನಮ್ಮ, ಮುನಿರಾಜು ಮುಂತಾದವರು ಭಾಗವಹಿಸಿದ್ದರು.