ಬೆಂ.ಗ್ರಾ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ: 60ಕ್ಕೂ ಹೆಚ್ಚು ಸಾಧಕ ಗಣ್ಯರಿಗೆ ಪುರಸ್ಕಾರ

ತಾಲೂಕಿನ ಕನಸವಾಡಿಯಲ್ಲಿ ಆಯೋಜಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಭಾನುವಾರ ಸಂಜೆ ಜಿ.ಗೋಪಿನಾಥ್‌ ವೇದಿಕೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ಸರ್ವಾಧ್ಯಕ್ಷ ಟಿ.ಕೆಂಪಣ್ಣ ಮಾತನಾಡಿ, ಎರಡು ದಿನಗಳ ಕಾಲ ನಾಡಿನ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಕುರಿತು ವಿವಿಧ ಸ್ತರಗಳಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಸಾಹಿತ್ಯದ ಆಲೋಚನೆಗಳು ವಿಭಿನ್ನ ವಲಯಗಳನ್ನು ಮುಟ್ಟುವ ಹೊಸ ಮಾದರಿಯೊಂದು ಸಮ್ಮೇಳನದ ಮೂಲಕ ಹೊರಬಂದಿದೆ. ಸಾಂಸ್ಕೃತಿಕ ಮತ್ತು ಸಾಹಿತ್ಯ ವಲಯದ ಸಮನ್ವಯದ ವೇದಿಕೆಯಂತಿದ್ದ ಸಮ್ಮೇಳನದಲ್ಲಿ ಸದಭಿರುಚಿಯ ವಿಶ್ಲೇಷಣೆಗಳು ನಡೆದಿವೆ. ಎಲ್ಲ ಹಂತಗಳಲ್ಲೂ ಸಮ್ಮೇಳನ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಘಟಕಗಳು, ಸ್ಥಳೀಯವಾಗಿ ಆಯೋಜನೆಯ ನೇತೃತ್ವ ವಹಿಸಿದ್ದ ಎಲ್ಲ ಸಾಹಿತ್ಯಾಸಕ್ತರು ಅಭಿನಂದನಾರ್ಹರು ಎಂದು ತಿಳಿಸಿದರು.

60ಕ್ಕೂ ಹೆಚ್ಚು ಗಣ್ಯರಿಗೆ ಸನ್ಮಾನ:

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಮತ್ತು ದೇವನಹಳ್ಳಿ ತಾಲೂಕಿನ 40ಕ್ಕೂ ಹೆಚ್ಚು ಗಣ್ಯರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಧುರೆ ಹೋಬಳಿಯ ಹಿರಿಯ ಮುಖಂಡರು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 20ಕ್ಕೂ ಹೆಚ್ಚು ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಸಮ್ಮೇಳನದ ಸರ್ವಾಧ್ಯಕ್ಷ ಟಿ.ಕೆಂಪಣ್ಣ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ತಾಪಂ ಮಾಜಿ ಅಧ್ಯಕ್ಷ ಎಂ.ಲಕ್ಷ್ಮೀಪತಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ, ಕಾರ್ಯದರ್ಶಿ ಕೆ.ಆರ್.ರವಿಕಿರಣ್, ಕೋಶಾಧ್ಯಕ್ಷ ಮುನಿರಾಜು, ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಹೋಬಳಿ ಅಧ್ಯಕ್ಷ ಜಿ.ಸುರೇಶ್, ಹೊಂಗಿರಣ ಸಮಾನ ಮನಸ್ಕರ ವೇದಿಕೆಯ ವೆಂಕಟಾಚಲಪತಿ, ನಿವೃತ್ತ ಮುಖ್ಯಶಿಕ್ಷಕ ರಾಮಯ್ಯ, ರವಿಕುಮಾರ್, ನಿವೃತ್ತ ಕಾರಾಗೃಹ ಅಧೀಕ್ಷಕ ಲಕ್ಷ್ಮೀನಾರಾಯಣ್, ವೀಣೆ ತಯಾರಕ ಉಮೇಶ್, ಪತ್ರಕರ್ತರ ಕ್ಷೇಮಾಭಿವೃದ್ದಿ ಟ್ರಸ್ಟ್‌ ಅಧ್ಯಕ್ಷ ಡಿ.ಶ್ರೀಕಾಂತ ಸೇರಿದಂತೆ ಮಧುರೆ ಹೋಬಳಿಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *