ರಾಜ್ಯ ಸರ್ಕಾರವು ಒಂದನೇ ತರಗತಿಯ ದಾಖಲಾತಿಗೆ ಕನಿಷ್ಠ ವಯೋಮಿತಿ 6 ವರ್ಷ ಪೂರೈಸಿರಬೇಕು ಆದೇಶವನ್ನು ಪ್ರಸಕ್ತ ಸಾಲಿನಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿರುವ ಕ್ರಮ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ಆದೇಶವನ್ನು ಸರ್ಕಾರ ಹಿಂಪಡೆದು ವಯೋಮಿತಿ ಸಡಿಲಿಕೆ ಮಾಡಬೇಕೆಂದು ಒತ್ತಾಯಿಸಿ, ಕನ್ನಡ ಪಕ್ಷದ ವತಿಯಿಂದ ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕನ್ನಡ ಪಕ್ಷದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಸಂಜೀವ್ ನಾಯಕ್, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ನಿಯಮದ ಪ್ರಕಾರ, 2025ರ ಜೂನ್ 1ಕ್ಕೆ 6 ವರ್ಷ ತುಂಬಿರುವ ಮಕ್ಕಳಿಗೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡುವುದಾಗಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಹೇಳುತ್ತಿವೆ. ಈ ಹಿಂದೆ 5 ವರ್ಷ 10 ತಿಂಗಳು ತುಂಬಿದ್ದರೆ ದಾಖಲಾತಿ ಮಾಡಿಕೊಳ್ಳಲಾಗುತ್ತಿತ್ತು. ಇದರಿಂದ ರಾಜ್ಯದಲ್ಲಿ 6 ವರ್ಷ ತುಂಬದ ಯುಕೆಜಿ ಮಕ್ಕಳು ಮತ್ತೆ ಒಂದು ವರ್ಷ ಯುಕೆಜಿ ಪುನರಾವರ್ತಿಸಬೇಕಾಗದ ಪರಿಸ್ಥತಿ ಎದುರಾಗಿದ್ದು ಪೋಷಕರಿಗೆ ಆರ್ಥಿಕ ಹೊರೆಯಾಗಲಿದ್ದು, ಮಕ್ಕಳ ಮನೋಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದರು.
ಈ ನಿಯಮದಿಂದ ರಾಜ್ಯದಲ್ಲಿ ಇಂಥ ಸುಮಾರು ಐದು ಲಕ್ಷ ಮಕ್ಕಳು ಇದ್ದು ಅವರ ಶೈಕ್ಷಣಿಕ ಜೀವನ ಸಂದಿಗ್ಧಕ್ಕೆ ಸಿಲುಕಿದೆ ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿವೇಚನಾ ರಹಿತ ನಿರ್ಧಾರ ಕಾರಣವಾಗಿದ್ದು, ಇಂತಹ ಅಸಮರ್ಥರು ಶಿಕ್ಷಣ ಸಚಿವರಾಗಿರುವುದು ರಾಜ್ಯದ ದುರಂತವಾಗಿದೆ. ಬಹುತೇಕ ಶಾಲೆಗಳು ಮಕ್ಕಳನ್ನು ಎಲ್ಕೆಜಿಗೆ ಸೇರಿಸಿಕೊಳ್ಳುವಾಗ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈಗ ದಿಢೀರ್ ನಿಯಮ ಮುಂದಿಡುತ್ತಿವೆ ಎನ್ನುವುದು ಪೋಷಕರ ಆರೋಪ ಇಂಥ ಮಕ್ಕಳ ಪಟ್ಟಿಯಲ್ಲಿ ಒಂದೆರಡು ದಿನದ ವ್ಯತ್ಯಾಸ ಇರುವವರು, ವಾರಗಳ, ತಿಂಗಳ ವ್ಯತ್ಯಾಸ ಇರುವವರೂ ಇಲ್ಲದಿದ್ದರೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕೂಡಲೇ ಹಿಂದಿನ ವರ್ಷದಂತೆ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.
ಕನ್ನಡ ಜಾಗೃತ ಪರಿಷತ್ತಿನ ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ, ಸರ್ಕಾರಗಳಿಗೆ ಶಿಕ್ಷಣ ನೀತಿಗಳನ್ನು ರೂಪಿಸುವಲ್ಲಿ ಇರುವ ಕಾಳಜಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಇಲ್ಲ, ಮುಂಚೆ ಶಿಕ್ಷಣಾಕಾರಿಗಳು ಶಾಲಾ ಶಿಕ್ಷಕರ ಕಾರ್ಯ ಕ್ಷಮತೆ, ಶಿಕ್ಷಣದ ಗುಣಮಟ್ಟಗಳನ್ನು ಪರೀಕ್ಷಿಸುತ್ತಿದ್ದರು. ಆದರೆ ಈಗ ಶಿಕ್ಷಕರಿಗೇ ಓದುವ ಹವ್ಯಾಸವಿಲ್ಲದೇ ಗುಣಮಟ್ಟ ಕುಸಿಯುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ಜಿಲ್ಲಾ ಘಟಕದ ಅದ್ಯಕ್ಷ ಮುನಿಪಾಪಯ್ಯ, ತಾಲೂಕು ಅಧ್ಯಕ್ಷ ಡಿ.ವೆಂಕಟೇಶ್, ಛಲವಾದಿ ಮಹಾ ಸಭಾದ ತಾಲೂಕು ಅಧ್ಯಕ್ಷ ಗುರುರಾಜಪ್ಪ,
ತಾಲೂಕು ಶಿವರಾಜ್ಕುಮಾರ್ ಕನ್ನಡ ಸೇನಾ ಸಮಿತಿ ಅಧ್ಯಕ್ಷ ಜೆ.ಆರ್.ರಮೇಶ್, ಉಪಾಧ್ಯಕ್ಷ ಜಿ.ರಾಮು, ಕನ್ನಡ ಪಕ್ಷದ ವಿ.ಪರಮೇಶ್, ಆರ್.ರಂಗನಾಥ್, ಬೋರೇಗೌಡ, ಕೆ.ಎನ್.ಕುಮಾರ್, ಕೇಬಲ್ ಮುನಿರಾಜು, ಕಾವೇರಿ ಕನ್ನಡ ಸಂಘದ ಮೋಹನ್ ಕುಮಾರ್, ಕನ್ನಡ ಜಾಗೃತ ಪರಿಷತ್ತಿನ ಸೂರ್ಯನಾರಾಯಣ್, ಆನಂದ್ ರಾಜ್, ಚಂದ್ರಣ್ಣ ಭಾಗವಹಿಸಿದ್ದರು.