ಮನೆ ಕಳ್ಳತನ ಆರೋಪಿ‌ ಸೆರೆ: ಕಳುವಾಗಿದ್ದ ಚಿನ್ನದ ಒಡವೆ ದೂರುದಾರರಿಗೆ ಹಸ್ತಾಂತರ: ಪೊಲೀಸರ ಕಾರ್ಯಕ್ಕೆ‌ ಸಾರ್ವಜನಿಕರ ಮೆಚ್ಚುಗೆ 

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ‌ ಮೇಳೇಕೋಟೆ ಗ್ರಾಮದಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಮನೆ ಕಳ್ಳತನ ನಡೆದಿತ್ತು. ಬೀರುವಿನಲ್ಲಿದ್ದ ಸುಮಾರು 3 ಲಕ್ಷದ 60 ಸಾವಿರ ಮೌಲ್ಯದ 45 ಗ್ರಾಂ ತೂಕದ ಚಿನ್ನದ ಒಡವೆಗಳು ಕಳವು ಆಗಿರುವುದು ಜ.29ರಂದು ಮನೆ ಮಾಲೀಕರಿಗೆ ಕಂಡುಬಂದಿತ್ತು. ಈ ಕುರಿತು‌ ಫೆ.10ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆ ಮಾಲೀಕರು ಪ್ರಕರಣ‌ ದಾಖಲು ಮಾಡಿದರು. ಪ್ರಕರಣ ದಾಖಲಿಸಿಕೊಂಡ‌ ಪೊಲೀಸರು ಸೂಕ್ತ ತನಿಖೆ ನಡೆಸಿ ಮನೆ ಕಳ್ಳನನ್ನು ಬಂಧಿಸಿ, ಬಂಧಿತನಿಂದ‌ ಒಡವೆಗಳನ್ನು ವಶಕ್ಕೆ ಪಡೆದು, ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು ಇಂದು ಒಡವೆ ಮಾಲೀಕರನ್ನು ಠಾಣೆಗೆ ಕರೆಸಿ ಕಳವು ಆಗಿದ್ದ ಒಡವೆಗಳನ್ನು ಹಸ್ತಾಂತ ಮಾಡಿದರು.

ಘಟನೆ ವಿವರ:

ದೂರುದಾರರಾದ ಸಲ್ಮಾ ಅವರ ತವರು ಮನೆಯವರು 20 ವರ್ಷಗಳಿಂದೆ ಸಲ್ಮಾ ಅವರ ಮದುವೆ ಸಮಯದಲ್ಲಿ 2 ಜೊತೆ ಪ್ಲೇನ್ ಓಲೆ, ಒಂದು ಜೊತೆ ಯಾಂಗಿಂಗ್ಸ್ ವಿತ್ ಮಾಟಿ, 3 ಉಂಗುರಗಳು ಸೇರಿದಂತೆ ಒಟ್ಟು 45 ಗ್ರಾಂ ಚಿನ್ನ ಹಾಕಿದ್ದರು.

ಅಷ್ಟು ಚಿನ್ನದ ಒಡವೆಗಳನ್ನು ಸಲ್ಮಾ ಮನೆಯಲ್ಲಿನ ಬೀರುವಿನಲ್ಲಿ ಇಟ್ಟಿದ್ದರು. ಸಲ್ಮಾ ಅವರ ಗಂಡನಿಗೆ ಹುಷಾರಿಲ್ಲದ ಕಾರಣ ಗಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಓಡಾಡುತ್ತಿದ್ದರು, ಆಗಾಗಿ ಸುಮಾರು 5-6 ತಿಂಗಳ ಹಿಂದೆ ಬೀರುವಿನಲ್ಲಿ ಇಟ್ಟಿದ್ದ ಚಿನ್ನದ ಒಡವೆಗಳ ಬಗ್ಗೆ ಗಮನ ಹರಿಸಿರಲಿಲ್ಲ.

ಜ.29ರಂದು ಸಲ್ಮಾ ಅವರ ತಾಯಿ ಮನೆಯಲ್ಲಿ ಇಟ್ಟಿದ್ದ ಇನ್ನೆರಡು ಉಂಗುರಗಳನ್ನು ತೆಗೆದುಕೊಂಡು ಬಂದು ಬೀರುವಿನಲ್ಲಿ ಇಡಲು ಹೋದಾಗ ಬೀರುವಿನಲ್ಲಿ ಇಟ್ಟಿದ್ದ ಚಿನ್ನದ ಒಡವೆಗಳು ಇರಲಿಲ್ಲ.

ಸಲ್ಮಾ ಅವರು ಭಯಗೊಂಡು ಕೂಡಲೇ ಈ ವಿಚಾರವನ್ನು ಅವರ ಗಂಡನಿಗೆ ತಿಳಿಸಿದ್ದಾರೆ. ಮನೆಯಲ್ಲಿ ಹುಡುಕಿದಾಗ ಚಿನ್ನದ ಒಡವೆಗಳು ಸಿಗಲಿಲ್ಲ. ಈ ಹಿನ್ನೆಲೆ ಫೆ.10ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲು ಮಾಡುತ್ತಾರೆ.

ದೂರು ದಾಖಲಿಸಿಕೊಂಡು ಈ ಕುರಿತು ತನಿಖೆ ಆರಂಭಿಸಿದ ಇನ್ಸೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ಸಿಬ್ಬಂದಿ ಸುನೀಲ್ ಬಾಸಗಿ, ಅರ್ಜುನ್ ಲಮಾಣಿ, ಸಚಿನ್ ಉಪ್ಪಾರ್, ಪ್ರವೀಣ್, ಹರೀಶ್ ಕೆ.ಎನ್‌ ಅವರ ತಂಡ ಆರೋಪಿಯನ್ನು ಬಂಧಿಸಿ ಒಡವೆಗಳನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ.

 

ಕಳ್ಳನ ಕೈಚಳಕ

ಮನೆಯ ಮಾಲೀಕ ಫಕೃದ್ದೀನ್ ಮಗನ ಸ್ನೇಹಿತನಾದ ಮಹೇಶ್ ಅಲಿಯಾಸ್ ಗೇರು ಎಂಬುವವನೇ ಮನೆಯಲ್ಲಿನ‌ ಚಿನ್ನದ ಒಡವೆಗಳನ್ನು‌ ಕದ್ದ ಆರೋಪಿ ಎಂದು ಮೂಲಗಳಿಂದ ತಿಳಿದುಬಂದಿದೆ.

ಈತ ಕೃತ್ಯ ನಡೆದ ಹಿಂದಿನ ದಿನ ರಾತ್ರಿ ಗೆಳೆಯನೊಂದಿಗೆ ಎಣ್ಣೆ ಪಾರ್ಟಿ ಮಾಡಿ, ಮರು ದಿನ ರಾತ್ರಿ ಮನೆಯಲ್ಲಿ ಯಾರೂ‌ ಇಲ್ಲದ ಸಮಯದಲ್ಲಿ ಗೆಳೆಯನ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾನೆ‌ ಎನ್ನಲಾಗಿದೆ.

ಈ ವಿಚಾರ ತನಿಖೆಯ ವೇಳೆ ತಿಳಿದು ಬಂದಿದ್ದು, ಆರೋಪಿ ಮಹೇಶ ಅಲಿಯಾಸ್ ಗೇರು ಎಂಬಾತನನ್ನು ಪೊಲೀಸರು ಬಂಧಿಸಿ, ಆತನಿಂದ ಸುಮಾರು 3 ಲಕ್ಷದ 60 ಸಾವಿರ ಮೌಲ್ಯದ 45 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಕ್ಕೆ ಪಡೆದ ಸಾಧಿಕ್ ಪಾಷಾ ಅವರು ದೂರುದಾರರಾದ ಸಲ್ಮಾ ಅವರಿಗೆ ಹಸ್ತಾಂತರ ಮಾಡಿದ್ದಾರೆ.

ದೂರುದಾರ ಸಲ್ಮಾ ಅವರು ಕಳವು ಆಗಿದ್ದ ತನ್ನ ಒಡವೆಗಳನ್ನು ಪತ್ತೆ ಮಾಡಿ ವಾಪಸ್ ನೀಡಿದ್ದಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಧನ್ಯವಾದ ಅರ್ಪಿಸಿ, ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

Leave a Reply

Your email address will not be published. Required fields are marked *