ಇಂದು ನಾಡಿನೆಲ್ಲೆಡೆ ಶ್ರೀ ರಾಮನವಮಿ ಸಂಭ್ರಮ ಸಡಗರ. ಶ್ರೀ ರಾಮನವಮಿ ಅಂಗವಾಗಿ ಶ್ರೀರಾಮ ಹಾಗೂ ಆಂಜನೇಯ ದೇಗುಲಗಳು ಸೇರಿದಂತೆ ವಿವಿದೆಡೆಗಳಲ್ಲಿ ಭಾನುವಾರ ಸಂಭ್ರಮ, ಸಡಗರ ಹಾಗೂ ಶ್ರದ್ಧ ಭಕ್ತಿಯಿಂದ ಪೂಜೆ ಪುನಸ್ಕಾರಗಳು, ಎಲ್ಲೆಲ್ಲೂ ಶ್ರೀ ರಾಮನಾಮಗಳು ಮೊಳಗಿದವು.
ತಾಲೂಕಿನ ಶ್ರೀರಾಮ ಹಾಗೂ ಆಂಜನೇಯಸ್ವಾಮಿ ದೇವಾಲಯಗಳನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ, ಮಹಾಮಂಗಳಾರತಿ ಮಾಡಲಾಯಿತು. ದೇವರಿಗೆ ಬೆಳಗ್ಗೆಯಿಂದಲೇ ಅಭಿಷೇಕಗಳು ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಇಂದು ಮುಂಜಾನೆಯಿಂದಲೇ ಸಹಸ್ರಾರು ಭಕ್ತರು ದೇವಾಲಯಗಳಿಗೆ ಆಗಮಿಸಿ ದೇವರ ದರ್ಶನ ಪಡೆದು, ಪಾನಕ, ಮಜ್ಜಿಗೆ, ಕೋಸಂಬರಿ ತಿಂದು ದೇವರ ಕೃಪೆಗೆ ಪಾತ್ರರಾದರು.
ಗ್ರಾಮೀಣ ಪ್ರದೇಶಗಳಲ್ಲಿರುವ ಶ್ರೀ ರಾಮ ಆಂಜನೇಯ ದೇಗುಲಗಳಿಗೆ ನವಮಿ ಉತ್ಸವ ಅಂಗವಾಗಿ ದೇವಸ್ಥಾನಗಳಿಗೆ ಸುಣ್ಣ ಬಣ್ಣಗಳಿಂದ ಹಾಗೂ ಹೂವು, ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಾಮ ಮಹಿಮೆ ಸಾರುವ ಭಕ್ತಿ ಪ್ರಧಾನ ಗೀತೆಗಳು ಎಲ್ಲೆಡೆ ಮೊಳಗಿದವು.
ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರೂ ರಾಮನ ಶ್ರೀರಾಮ ಆಂಜನೇಯನ ದೇವರಿಗೆ ಭಕ್ತಿ ಪರವಶರಾದರು.
ದಿಮಘಟ್ಟನಹಳ್ಳಿ ಕುಟುಂಬದವರಿಂದ ಅರಳು ಮಲ್ಲಿಗೆ ಗೇಟ್ ಬಳಿ ಇರುವ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನದಲ್ಲಿ ಸೌತೆಕಾಯಿ, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಹೆಸರು ಬೇಳೆ ಗೆಡ್ಡೆಕೋಸುಗಳಿಂದ ಗಣಪತಿ ಚಿತ್ರ ಬಿಡಿಸಿ ಅಲಂಕಾರ ಮಾಡಲಾಗಿತ್ತು. ಈ ಚಿತ್ರಭಕ್ತರ ಕಣ್ಮನ ಸೆಳೆಯಿತು.