ಮಾಗಿ ಉಳುಮೆಗೆ ಇದು ಸಕಾಲ- ಕೃಷಿ ಇಲಾಖೆ

ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ದಗೊಳಿಸುವ “ಮಾಗಿ ಉಳುಮೆ” ಪಾರಂಪರಿಕ ಕೃಷಿ ಪದ್ಧತಿಯಾಗಿದೆ. ಮುಂಗಾರಿಗಿಂತ ಮುಂಚೆ ಹಾಗೂ ಹಿಂಗಾರು ಬೆಳೆಗಳ ಕಟಾವಿನ ನಂತರ ಅಂದರೆ ಬೇಸಿಗೆಯಲ್ಲಿ ಕೈಗೊಳ್ಳಬೇಕಾದ ಕಡಿಮೆ ಖರ್ಚಿನ ನೆಲ ಅಗೆತ ಅಥವಾ ತಿರುವಿ ಹಾಕುವಿಕೆಗೆ ಈಗ ಸಕಾಲ ರೈತರು ಈ ಸಮಯದ ಸದುಪಯೋಗ ಪಡೆದುಕೊಳ್ಳುವಂತೆ ಕೃಷಿ ಇಲಾಖೆ ತಿಳಿಸಿದೆ.

ಜನವರಿ ಮತ್ತು ಫೆಬ್ರವರಿ ತಿಂಗಳೊಳಗೆ ರೈತರು ಬೆಳೆದ ಕೃಷಿ ಬೆಳೆಗಳನ್ನು ಕಟಾವು ಮಾಡಲು ಸೂಕ್ತ ಸಮಯವಾಗಿದೆ. ಭೂಮಿಯನ್ನು ಹದವಾಗಿ ಉಳುಮೆ ಮಾಡಬೇಕು. ಅಂದರೆ, ಪೂರ್ಣ ಅವಧಿ ಮುಗಿದ ನಂತರ ಮುಂದಿನ ಹಂಗಾಮಿನಲ್ಲಿ ಬೆಳೆ ಬೆಳೆಯಲು ಭೂಮಿ ಸಿದ್ಧಗೊಳಿಸುವುದಕ್ಕೆ “ಮಾಗಿ ಉಳುಮೆ” ಎನ್ನುವರು.

ಸಾಮಾನ್ಯವಾಗಿ ನೀರಾವರಿ ಸೌಲಭ್ಯವಿದ್ದಲ್ಲಿ ಮಾತ್ರ ರೈತರು ಬೇಸಿಗೆ ಹಂಗಾಮಿನಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ. ಬೇಸಿಗೆ ಬೆಳೆಗೆ ಅವಕಾಶವಿಲ್ಲದ ಸಂದರ್ಭದಲ್ಲಿ ಮಾರ್ಚ್, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮೊದಲ ಮಳೆ ಬಿದ್ದ ತಕ್ಷಣ ಟ್ರಾಕ್ಟರ್ ಚಾಲಿತ ನೇಗಿಲು ಅಥವಾ ಎತ್ತಿನ ನೇಗಿಲಿನಿಂದ ಉಳುಮೆಯನ್ನು ಕೈಗೊಳ್ಳಬೇಕು. ಕೆಂಪು ಮಣ್ಣಿನಲ್ಲಿ ವರ್ಷಕ್ಕೊಮ್ಮೆ ಮಾಗಿ ಉಳುಮೆ ಕೈಗೊಳ್ಳಬೇಕು.

ಬಹುತೇಕ ರೈತರು ಮಾಗಿ ಉಳುಮೆ ಮಾಡುವುದನ್ನು ಮರೆತಿರುವುದರಿಂದ ಅನೇಕ ರೀತಿಯ ಸಸ್ಯರೋಗ, ಕೀಟರೋಗ ಭಾದೆ ಹೆಚ್ಚಾಗಲು ಕಾರಣವಾಗಿದೆ. ಈ ವರ್ಷದಲ್ಲಿ ಅವಧಿಗಿಂತ ಮುಂಚಿತವಾಗಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವುರಿಂದ, ಮಾಗಿ ಉಳುಮೆ ಮಾಡಿದರೆ ಮಣ್ಣಿನ ಕೆಳ ಪದರದಲ್ಲಿ ಇರುವ ರೋಗಾಣುಗಳ ಶಿಲೀಂದ್ರಗಳು ನಾಶವಾಗುತ್ತವೆ.

ಮಾಗಿ ಉಳುಮೆಯ ಪ್ರಯೋಜನಗಳು

ಹಿಂದಿನ ಹಂಗಾಮಿನಲ್ಲಿ ಬೆಳೆದ ಬೆಳೆಯ ತ್ಯಾಜ್ಯ ವಸ್ತುಗಳನ್ನು ಮಣ್ಣಿನಲ್ಲಿ ಸೇರುವಂತೆ ಮಾಡಲಾಗುವುದರಿಂದ ತ್ಯಾಜ್ಯವು ಕೊಳೆತು ಸಾವಯವ ಗೊಬ್ಬರವಾಗುತ್ತದೆ ಮಾಗಿ ಉಳುಮೆಯಿಂದ ಮಣ್ಣು ಸಡಿಲಗೊಳ್ಳುತ್ತದೆ. ಇದರಿಂದ ಮಳೆ ನೀರು ಸಾಕಾಷ್ಟು ಪ್ರಮಾಣದಲ್ಲಿ ಭೂಮಿಯಲ್ಲಿ ಇಂಗಲು ಸಹಕಾರಿಯಾಗುತ್ತದೆ. ಹಿಂದಿನ ಹಂಗಾಮುಗಳಲ್ಲಿ ಬೆಳೆದ ಬೆಳೆಗಳಲ್ಲಿದ್ದ ಅಥವಾ ಮಣ್ಣಿನಲ್ಲಿರುವ ಕೀಟ,ಮೊಟ್ಟೆಗಳು ಹಾಗೂ ರೋಗಗಳು ಸೂರ್ಯನ ಬಿಸಿಲಿನ ತಾಪಕ್ಕೆ ನಾಶವಾಗುವುದರಿಂದ ಕೀಟ ಮತ್ತು ರೋಗಗಳನ್ನು ನಿಯಂತ್ರಿಸಬಹುದು.

ಮಾಗಿ ಉಳುಮೆಯನ್ನು ಇಳಿಜಾರಿಗೆ ಅಡ್ಡಲಾಗಿ ಮಾಡುವುದರಿಂದ ಅಕಾಲಿಕ ರಭಸದ ಮಳೆಯಿಂದ ಮಣ್ಣು ಕೊಚ್ಚಿ ಹೋಗದಂತೆ ತಡೆಯಬಹುದು, ಬಿದ್ದಂತಹ ಮಳೆ ನೀರು ಉಳುಮೆಯ ಕಿರುಪಾತಿಗಳಲ್ಲೇ ಶೇಖರಣೆಯಾಗುತ್ತದೆ. ಮಾಗಿ ಉಳುಮೆಯಿಂದ ಕಳೆಗಳಾದ ಗರಿಕೆಯ ಬೇರು ಮತ್ತು ಜೇಕಿನ ಗಡ್ಡೆಗಳನ್ನು ಆರಿಸಿ ತೆಗೆಯಲು ಅನುಕೂಲ ಆಗುವುದರಿಂದ ಬಹುವಾರ್ಷಿಕ ಕಳೆ ನಿಯಂತ್ರಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *