ಜನಕ್ಕೆ ಭೂಮಿ ಕೊಡಲಿಕ್ಕೆ ಅವಕಾಶವೇ ಇಲ್ಲವಾಗಿದೆ: ದರ್ಖಾಸ್ತು ಸಮಿತಿ ಇದ್ದು ಪ್ರಯೋಜನವಿಲ್ಲವಾಗಿದೆ-ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ವಿಧಾನಸಭಾ ಕ್ಷೇತ್ರವು ನಗರಸಭೆ ಹಾಗೂ ವೇಮಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಂಜೂರಾತಿಗೆ ಅವಕಾಶವಿಲ್ಲವಾಗಿದೆ. ಉಳಿದೆಡೆ ಕೊಡಲು ಜಮೀನೂ ಇಲ್ಲ, ಮಂಜೂರು ಮಾಡಲು ಬಹಳಷ್ಟು ನಿರ್ಬಂಧಗಳಿದ್ದು, ದರ್ಖಾಸ್ತು ಸಮಿತಿ ಇದ್ದು ಏನು ಪ್ರಯೋಜನವಿಲ್ಲವಾಗಿದೆ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್‌ ಪ್ರಶ್ನಿಸಿದರು.

ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ದರ್ಖಾಸ್ತು ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆ (5 ಕಿ.ಮೀ ವ್ಯಾಪ್ತಿ) ಹಾಗೂ ಪಟ್ಟಣ ಪಂಚಾಯಿತಿ (3 ಕಿ.ಮೀ ವ್ಯಾಪ್ತಿ) ವ್ಯಾಪ್ತಿಯಲ್ಲಿ ಭೂಮಂಜೂರಾತಿ ಮಾಡುವಂತಿಲ್ಲ ಎಂಬ ಕಾನೂನು ಇದೆ. ಆದರೆ, ಹೆಚ್ಚಿನವರು ಪಟ್ಟಣ ಪಂಚಾಯಿತಿ ರೂಪುಗೊಳ್ಳುವ ಮುನ್ನವೇ ಅರ್ಜಿ ಹಾಕಿಕೊಂಡಿದ್ದಾರೆ. ಅರ್ಜಿಗಳನ್ನು ವಿಲೇವಾರಿ ಮಾಡಿ ಪಟ್ಟಣ ಪಂಚಾಯಿತಿ ರೂಪಿಸಬೇಕಿತ್ತು. ಈ ವಿಚಾರದ ಬಗ್ಗೆ ಕಂದಾಯ ಸಚಿವರು ಹಾಗೂ‌ ಜಿಲ್ಲಾಧಿಕಾರಿ ಗಳೊಂದಿಗೆ ಜೊತೆ ಚರ್ಚಿಸುತ್ತೇನೆ. ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಭೂಮಂಜೂರಾತಿ ಸಭೆಗೆ ದರ್ಖಾಸ್ತು ಸಮಿತಿ ಸದಸ್ಯರೆಲ್ಲರೂ ಬಂದಿದ್ದರು. ದುರದೃಷ್ಟಕರ ಎಂದರೆ ದರ್ಖಾಸ್ತು ಸಮಿತಿಗೆ ಒಟ್ಟು 17,031 ಅರ್ಜಿಗಳು ಬಂದಿವೆ. ಈ ಪೈಕಿ 16,216 ಅರ್ಜಿ ವಜಾಗೊಂಡಿವೆ. ಬಾಕಿ ಇರುವ ಅರ್ಜಿಗಳು 469. ಭೂಮಂಜೂರಾತಿಗೆ ಅರ್ಹ ಇರುವ ಪ್ರಕರಣ 43. ಭೂಮಂಜೂರಾತಿ ನಿಯಮಾನುಸಾರ ಬಂದಿಲ್ಲದ ಅರ್ಜಿಗಳು 508 ಎಂದು ಮಾಹಿತಿ ನೀಡಿದರು.

ಸುಮಾರು 30 ಗುಂಟೆ ಜಮೀನು ಮೇಲ್ಪಟ್ಟು ಇರುವ ಅಂದರೆ ಜಮೀನು ಇದ್ದೂ ಅರ್ಜಿ ಹಾಕಿರುವ 128 ಅರ್ಜಿಗಳನ್ನು ವಜಾ ಮಾಡಲಾಗಿದೆ. ನಿರ್ಬಂಧಿತ ಅಂತರದಲ್ಲಿರುವುದು ಅಂದರೆ ನಗರಸಭೆ (5 ಕಿ.ಮೀ ವ್ಯಾಪ್ತಿ), ಪಟ್ಟಣ ಪಂಚಾಯಿತಿ (3 ಕಿ.ಮೀ ವ್ಯಾಪ್ತಿ) ವ್ಯಾಪ್ತಿಯಿಂದಲೇ ಭೂಮಂಜೂರಾತಿ ಕೋರಿ 7,987 ಅರ್ಜಿಗಳು ಬಂದಿವೆ. ಗೋಮಾಳ ಜಮೀನು ಲಭ್ಯವಿಲ್ಲ. ಆದರೂ ಅಂಥ ಪ್ರದೇಶದಲ್ಲಿ ಜಮೀನು ಕೋರಿ 6,692 ಅರ್ಜಿಗಳು ಬಂದಿವೆ. ಇವೆಲ್ಲಾ ವಜಾಗೊಂಡಿವೆ. ಅರ್ಜಿದಾರರು ವಾಸವಿಲ್ಲದ ಸ್ಥಳದಲ್ಲಿ ಜಮೀನು ಕೋರಿ ಬಂದಿದ್ದ 24 ಅರ್ಜಿಗಳು ವಜಾಗೊಂಡಿವೆ. 635 ಮಂದಿ ಅನುಭವದ‌ಲ್ಲಿ ಇಲ್ಲದವರು ಅರ್ಜಿ ಹಾಕಿದ್ದು, ವಜಾಗೊಂಡಿವೆ’ ಎಂದರು.

‘ಸ್ಪೀಕರ್‌ ಪೇಪರ್‌ ಎಸೆಯುವುದು ಸರಿಯೇ? ಸದನದೊಳಗೆ ಜಾತಿ, ಧರ್ಮ ಎಂಬುದಿಲ್ಲ. ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌ ಮುಸ್ಲಿಂ ಆಗಿದ್ದು, ತಮ್ಮ ಪಕ್ಷದವರನ್ನು ಸದನದಿಂದ ಅಮಾನತುಗೊಳಿಸಿದ್ದಾರೆ ಎಂಬ ಶಾಸಕ ಹರೀಶ್‌ ಪೂಂಜಾ ಮಾತು ಸರಿಯೇ?’ ಎಂದು ಪ್ರಶ್ನಿಸಿದರು.

‘ವಕ್ಫ್‌ ಮಂಡಳಿಯನ್ನೇ ರದ್ದು ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಲು ಮುಂದಾದರೆ ರಾಜ್ಯಗಳ ಒಪ್ಪಿಗೆಯೂ ಬೇಕಾಗುತ್ತದೆ. ಧರ್ಮಗಳಲ್ಲಿನ ಆಚರಣೆ ಪಾಲನೆ ಮಾಡಲು ಅಡ್ಡಿ ಮಾಡಬಾರದು. ಯಾವುದೇ ಧರ್ಮದ ಬಗ್ಗೆ ಟೀಕೆ ಮಾಡಬಾರದು. ತಾರತಮ್ಯ ಮಾಡಲು ಹೋಗಬಾರದು’ ಎಂದರು.

ರಾಜ್ಯದಲ್ಲಿ ಅಗತ್ಯ ವಸ್ತುಗಳ ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿ, ‘ಹಾಲಿನ ದರ 4 ಹೆಚ್ಚಳವಾಗಿದೆ. ಡೀಸೆಲ್‌, ಪೆಟ್ರೋಲ್‌ ದರ ಹೆಚ್ಚಿದೆ. ಖಂಡಿತ ಬಹಳ ಹೊರೆಯಾಗುತ್ತಿದೆ. ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕ ಹೆಚ್ಚಳವಾಗಿದೆ. ನನಗೇ ಆ ಅನುಭವವಾಗಿದೆ. ಆದರೆ, ಹೆಚ್ಚಳವಾಗಿರುತ್ತಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರಕ್ಕೆ ತೆರಿಗೆ ಸಂಗ್ರಹವಾಗುತ್ತದೆ. ಅಭಿವೃದ್ಧಿಗೆ ಹಣ ಬೇಡವೇ ಎಂದು ಕೇಳಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ಎಂ.ನಯನ, ಸಮಿತಿ ಸದಸ್ಯರಾದ ಸವಿತಾ ಮಂಜುನಾಥ್, ಖಾದ್ರಿಪುರ ಬಾಬು, ಕ್ಯಾಲನೂರು ಬಾಬಾಸಾಬ್ ಸೇರಿದಂತೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *