18 ಮಂದಿ ಶಾಸಕರ ಅಮಾನತು ವಿಚಾರ: ಅಮಾನತು ಆದೇಶ ಹಿಂಪಡೆಯುವಂತೆ ವಿಧಾನಸಭೆ ಸಭಾಧ್ಯಕ್ಷರಿಗೆ ಪತ್ರ ಬರೆದ ಆರ್.ಅಶೋಕ್

ವಿಧಾನಸಭೆಯ 18 ಶಾಸಕರನ್ನು ಅಮಾನತು ಮಾಡಿರುವ ನಿರ್ಣಯ ಅತ್ಯಂತ ಕಠೋರವಾಗಿದ್ದು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹಿಂಪಡೆಯಬೇಕೆಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದೇನೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಜನಸಾಮಾನ್ಯರ ಹಿತದೃಷ್ಟಿಯಿಂದ ಸಭಾಧ್ಯಕ್ಷರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಮತ್ತು ಆ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಮನವಿ ಪತ್ರದಲ್ಲೇನಿದೆ…?

ಮಾ.21ರಂದು ಕರ್ನಾಟಕ ವಿಧಾನಸಭೆಯ ಅಧಿವೇಶನದ ಸಮಯದಲ್ಲಿ ಸದನದಲ್ಲಿ ಹನಿಟ್ರ್ಯಾಪ್ ಹಾಗೂ ಮುಸ್ಲಿಮರಿಗೆ 4% ಮೀಸಲಾತಿ ವಿಚಾರದ ಚರ್ಚೆಯು ವಿಕೋಪಕ್ಕೆ ತಿರುಗಿದಾಗ ವಿರೋಧ ಪಕ್ಷದವರಾದ ನಾವೆಲ್ಲ ಸಭಾಧ್ಯಕ್ಷರ ಪೀಠದ ಸುತ್ತ ನಿಂತುಕೊಂಡು ಪ್ರತಿಭಟನೆ ಮಾಡಿರುತ್ತೇವೆ.

ಈ ಸಂದರ್ಭದಲ್ಲಿ ತಾವು ಸದನದಲ್ಲಿ ಪೀಠದ ಆದೇಶವನ್ನು ಲೆಕ್ಕಿಸದೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡಿರುತ್ತೀರೆಂದು, ಅಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡಿರುತ್ತೀರೆಂದು ವಿಧಾನಸಭೆಯ 18 ಸದಸ್ಯರನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಾಮಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳುಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತುಗೊಳಿಸಲಾಗಿರುತ್ತದೆ ಹಾಗೂ ಅದರ ಜೊತೆಗೆ ಇತರ ನಿರ್ಬಂಧಗಳನ್ನೂ ವಿಧಿಸಲಾಗಿರುತ್ತದೆ.

ರಾಜ್ಯದ ವಿಧಾನಮಂಡಲದ ಉಭಯ ಸದನಗಳು ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಳಗಳು. ಈ ಸ್ಥಳಗಳು “ಪ್ರಜಾಪ್ರಭುತ್ವದ ದೇಗುಲಗಳು” ಎಂದು ಕರೆದರೆ ತಪ್ಪೇನೂ ಇಲ್ಲ. ಈ ದೇಗುಲಗಳಲ್ಲಿನ ಸಭಾಧ್ಯಕ್ಷರು ಮತ್ತು ಸಭಾಪತಿಗಳಿಗೆ ಇರುವ ಸ್ನಾನವೂ ಅಷ್ಟೇ ಗೌರವಾನ್ವಿತವಾದುದು. ಈ ವಿಚಾರದಲ್ಲಿ ನನಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ.

ಮಾ.21ರಂದು ನಡೆದ ಘಟನೆ ಉದ್ದೇಶಪೂರ್ವಕವಾದುದು ಅಲ್ಲ ಅಥವಾ ನಿಮ್ಮ ಪೀಠಕ್ಕೆ, ಅಗೌರವ ತರುವ ಉದ್ದೇಶವೂ ಯಾವ ಶಾಸಕರಿಗೂ ಇರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ತಾವು ಸದನದ ಕಲಾಪ ನಿರ್ವಹಿಸುವುದನ್ನು ನಾವು ಅತ್ಯಂತ ಹತ್ತಿರದಿಂದ ನೋಡಿದ್ದೇವೆ. ಸಂಸದೀಯ ಚರ್ಚೆಯ ಗುಣಮಟ್ಟ ಭಾಷೆಯ ಬಳಕೆ, ಕಲಾಪಗಳಲ್ಲಿನ ನಿಯಮಗಳ ಪಾಲನೆ ಇತ್ಯಾದಿಗಳೆಲ್ಲವು ದಿನದಿಂದ ದಿನಕ್ಕೆ ಕುಸಿಯುತ್ತಿರುವ ಈ ದಿನಗಳಲ್ಲಿ ಯಾರಿಗೇ ಆಗಲೀ ಇದು ಅತ್ಯಂತ ಕಷ್ಟದ ಕೆಲಸ ಎಂಬುದು ಅರ್ಥವಾಗುತ್ತದೆ. ಅದಕ್ಕಾಗಿಯೇ ನಿಮ್ಮ ಬಗ್ಗೆ ನಮಗೆ ಅಪಾರವಾದ ಗೌರವವಿದೆ.

Leave a Reply

Your email address will not be published. Required fields are marked *

error: Content is protected !!