ಕನಿಷ್ಟ ಬೆಂಬಲ ಯೋಜನೆಯಡಿ ನೋಂದಾಯಿತ ರೈತರಿಂದ ರಾಗಿ ಖರೀದಿ ಪ್ರಕ್ರಿಯೆಗೆ ಮಾರ್ಚ್ 01 ರಿಂದ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು, ಖರೀದಿ ಪ್ರಕ್ರಿಯೆ ಪ್ರಾರಂಭ ಆದ ದಿನದಿಂದಲೂ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳು ರಾಗಿ ಖರೀದಿ ಕೇಂದ್ರದ ಬಳಿ ಉದ್ಭವಗೊಂಡು ರೈತರು ಪರಿತಪಿಸುವಂತಾಗಿದೆ.
ಈ ಹಿನ್ನೆಲೆ ಇಂದು ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದ ಬಳಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿ, ಪರಿಶೀಲನೆ ನಡೆಸಿದರು.
ರಾಗಿ ಬೆಳೆದಿರುವ ರೈತರಿಂದ ನಿಯಮಾನುಸಾರ ರಾಗಿ ಖರೀದಿ ಮಾಡಬೇಕು. ಯಾವುದೇ ಗೊಂದಲವಿಲ್ಲದೇ ಅಧಿಕಾರಿಗಳು ಸರ್ಕಾರದ ನಿಯಮನುಸಾರ ರಾಗಿ ಖರೀದಿ ಮಾಡಬೇಕು. ದಲ್ಲಾಳಿಗಳಿಗೆ ಅವಕಾಶ ಮಾಡಿಕೊಡಬಾರದು. ಒಂದು ದಲ್ಲಾಳಿಗಳ ಕಾಟ ಮುಂದುವರಿದರೆ ಕೂಡಲೇ ಪೊಲೀಸ್ ಠಾಣೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರೈತರಿಗೆ ಡಿಸಿ ಹಾಗೂ ಎಸ್ಪಿ ತಿಳಿಸಿದರು.
ರೈತರು ತಮಗೆ ನಿಗದಿ ಮಾಡಿದ ದಿನದಂದೇ ರಾಗಿ ಖರೀದಿ ಕೇಂದ್ರದ ಬಳಿ ಬರಬೇಕು. ಮುಂಚಿತವಾಗಿ ಬಂದು ಪರದಾಡಬಾರದು. ಯಾವ ದಲ್ಲಾಳಿಗೆ ಮಾರು ಹೋಗಬಾರದು. ಎಲ್ಲರ ರಾಗಿಯನ್ನು ನಿಗದಿತ ದಿನಾಂಕದೊಳಗೆ ಖರೀದಿ ಮಾಡಲಾಗುತ್ತದೆ. ರಾಗಿ ಖರೀದಿ ಕೇಂದ್ರದ ಬಳಿ ಲೋಪದೋಷ ಕಂಡುಬಂದಲ್ಲಿ ಸಂಬಂಧಪಟ್ಟವರಿಗೆ ತಿಳಿಸಿದರೆ ಕೂಡಲೇ ಬಗೆಹರಿಸಲಾಗುತ್ತದೆ ಎಂದರು.