ದೊಡ್ಡಬಳ್ಳಾಪುರಕ್ಕೆ ಸಂಚಾರಿ ಪೊಲೀಸ್ ಠಾಣೆ ಬೇಕೆಂದು ಸಾರ್ವಜನಿಕರ ಒತ್ತಾಯ ಮಾಡಿದ್ದರು ಈ ಕುರಿತು “ಪಬ್ಲಿಕ್ ಮಿರ್ಚಿ” ವರದಿ ಮಾಡಿತ್ತು, “ಪಬ್ಲಿಕ್ ಮಿರ್ಚಿ” ವರದಿ ಬೆನ್ನಲ್ಲೇ ಶಾಸಕ ಧೀರಜ್ ಮುನಿರಾಜ್ ಅವರು ಸದನದಲ್ಲಿ ಈ ಕುರಿತು ಪ್ರಸ್ತಾಪಿಸಿ ಗೃಹ ಸಚಿವ ಡಾ.ಪರಮೇಶ್ವರ್ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆ ಅತೀ ಶೀಘ್ರವಾಗಿ ದೊಡ್ಡಬಳ್ಳಾಪುರಕ್ಕೆ ಸಂಚಾರಿ ಪೊಲೀಸ್ ಠಾಣೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡುತ್ತೇನೆ. ಇದರ ಬಗ್ಗೆ ಪ್ರಸ್ತಾವನೆ ನೀಡಲು ತಿಳಿಸಿದ್ದೇವೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಅವರು ಭರವಸೆ ನೀಡಿದ್ದರು.
ದೊಡ್ಡಬಳ್ಳಾಪುರ ನಗರದ ರೈಲ್ವೆ ನಿಲ್ದಾಣ ಸಮೀಪ ಬೆಂಗಳೂರು ರಾಜ್ಯ ಹೆದ್ದಾರಿಯ ಬದಿಯಲ್ಲಿ ದೊಡ್ಡಬಳ್ಳಾಪುರ ನಗರ ಸಂಚಾರ ಪೊಲೀಸ್ ಠಾಣೆ ಮತ್ತು ಪೊಲೀಸ್ ಕವಾಯತು ಮೈದಾನಕ್ಕಾಗಿ ಮೀಸಲಿಟ್ಟಿರುವ 2 ಎಕರೆ 17 ಗುಂಟೆ ಸ್ಥಳಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಡಿವೈಎಸ್ ಪಿ ರವಿ ಪಿ, ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್, ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳ ಪರಿಶೀಲನೆ ನಂತರ “ಪಬ್ಲಿಕ್ ಮಿರ್ಚಿ” ನ್ಯೂಸ್ ವೆಬ್ ಸೈಟ್ ನೊಂದಿಗೆ ಮಾತನಾಡಿದ ಪೊಲೀಸ್ ಅಧೀಕ್ಷಕ ಸಿ.ಕೆ.ಬಾಬಾ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಇಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಅದೇರೀತಿ ಏಷ್ಯಾದ ಎರಡನೇ ಅತಿದೊಡ್ಡ ಕೈಗಾರಿಕ ಪ್ರದೇಶವಿದೆ. ಇಲ್ಲಿನ ಕಾರ್ಖಾನೆಗಳಿಗೆ ಲಕ್ಷಾಂತರ ಜನ ದೂರದ ಊರುಗಳಿಂದ ಕಾರ್ಮಿಕರು ಬರುತ್ತಾರೆ. ಈ ಹಿನ್ನೆಲೆ ಇಲ್ಲಿ ಸಂಚಾರ ದಟ್ಟಣೆಯೂ ಸಹ ಹೆಚ್ಚಾಗಿದೆ. ಆದ್ದರಿಂದ ಅಪಘಾತ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ದೊಡ್ಡಬಳ್ಳಾಪುರಕ್ಕೆ ಸಂಚಾರಿ ಠಾಣೆ ಅತ್ಯವಶ್ಯಕವಾಗಿ ಬೇಕು ಬೇಕು ಎಂದು ಹೇಳಿದರು.
2025-26ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಸಂಚಾರ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಆರ್ಥಿಕ ನೆರವು ನೀಡುವ ಕುರಿತು ಪ್ರಸ್ತಾಪಿಸಲಾಗಿದೆ.