ಕುಡಿಯುವ ನೀರಿನಲ್ಲಿ ಹುಳ ಹುಪ್ಪಟೆ: ಆಂತಕದಲ್ಲಿ ಗ್ರಾಮಸ್ಥರು: ಕ್ಯಾರೆ ಎನ್ನದ ಅಧಿಕಾರಿಗಳು

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಹಿರೇಮುದೇನಹಳ್ಳಿಯಲ್ಲಿರುವ ಓವರ್ ಹೆಡ್ ಟ್ಯಾಂಕ್ ನಿಂದ ಸರಬರಾಜಾಗುವ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣಗೊಂಡು ಹುಳ ಹುಪ್ಪಟೆಗಳು ಕಂಡು ಬರುತ್ತಿದ್ದು, ಊರಿನ ಗ್ರಾಮಸ್ಥರು ಆಂತಕಕ್ಕೆ ಸಿಲುಕಿದ್ದಾರೆ.

ಹಲವಾರು ದಿನಗಳಿಂದ ಕುಡಿಯುವ ನೀರಿನಲ್ಲಿ ಹುಳು ಹುಪ್ಪಟೆಗಳು ಕಂಡು ಬರುತ್ತಿದ್ದು, ಈ ಕುರಿತು ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಯಾವ ಕ್ರಮ ಕೈಗೊಳ್ಳದೇ ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಊರಿನ‌ ಗ್ರಾಮಸ್ಥರು ಆರೋಪಿಸಿದ್ದಾರೆ.

ಅನೇಕ ಬಡ ಕುಟುಂಬಗಳು ರೈತಾಪಿ ವರ್ಗದ ಜನರೇ ವಾಸಿಸುವ ಈ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಪೂರೈಸುವ ನೀರೇ ಕುಡಿಯಲು ಆಧಾರವಾಗಿದೆ.

ಅಲ್ಲದೇ ಜಾನುವಾರಗಳಿಗೂ ಕುಡಿಯಲು ಇದೇ ನೀರು ಬಳಕೆ ಮಾಡುತ್ತಿರುವುದರಿಂದ ಕಲುಷಿತ ನೀರು ಸರಬರಾಜು ಆಗುತ್ತಿದ್ದು, ಇದರಿಂದ ಅನೇಕ ರೋಗ ರುಜಿನಗಳು ಹರಡುವ ಆತಂಕ ಇಲ್ಲಿಯ ನಿವಾಸಿಗಳನ್ನು ಕಾಡುತ್ತಿದೆ.

ಕಳೆದ ಒಂದು ತಿಂಗಳಿನಿಂದ ಈ ರೀತಿ ಸಮಸ್ಯೆ ಆಗುತ್ತಿದ್ದು, ಕುರಿತು ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಪಂಚಾಯಿತಿ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುವುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.

ಓವರ್ ಹೆಡ್ ಟ್ಯಾಂಕ್ ನಿಂದ ಸರಬರಾಜಾಗುತ್ತಿರುವ‌ ನೀರಿನ ಪೈಪ್ ಸಹ ನಾಶವಾಗಿದ್ದು, ಇದನ್ನು ರಿಪೇರಿ ಮಾಡಿಲ್ಲ. ಪ್ಯೂರಿಫೈಯರ್ ವಾಟರ್ ಫಿಲ್ಟರ್ ಕೂಡ ಕೆಟ್ಟುನಿಂತು ಹಲವು ದಿನಗಳು ಕಳೆದರು ಸಂಬಂಧಪಟ್ಟ ಅಧಿಕಾರಿಗಳು ಖ್ಯಾರೆ ಎನ್ನುತ್ತಿಲ್ಲ. ಊರಿಗೆ ಸರಸಮರ್ಪಕ, ಶುದ್ಧ ಕುಡಿಯುವ ನೀರಿನ್ನು ಸರಬರಾಜು ಮಾಡಬೇಕು ಎಂದು ಊರಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಅಗತ್ಯ ಕ್ರಮವಹಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸೂಚಿಸಿದ್ದರು.

ಬೇಸಿಗೆ ಹಿನ್ನೆಲೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 080-22221050 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!