ಡಿಸಿಸಿ ಬ್ಯಾಂಕ್, ಕೋಮುಲ್ ಭ್ರಷ್ಟಾಚಾರ ಸಿಬಿಐ ತನಿಖೆಗೆ ಒತ್ತಾಯಿಸಿ ಮನವಿ

ಕೋಲಾರ: ಡಿ.ಸಿ.ಸಿ ಬ್ಯಾಂಕ್ ಮತ್ತು ಹಾಲು ಒಕ್ಕೂಟದಲ್ಲಿ ನೂರಾರು ಕೋಟಿ ಬಡವರ ಹಣ ಲೂಟಿ ಮಾಡಿದ್ದು ಸಿಬಿಐಗೆ ಒಪ್ಪಿಸಬೇಕೆಂದು ರೈತ ಸಂಘದಿಂದ ಸಹಕಾರ ಸಚಿವ ರಾಜಣ್ಣ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲೆಯ ಲಕ್ಷಾಂತರ ರೈತ ಮಹಿಳೆಯರ ಜೀವನಾಡಿಯ ಜೊತೆಗೆ ಎರಡು ಕಣ್ಣುಗಳಾಗಿರುವ ಬ್ಯಾಂಕ್ ಹಾಗೂ ಹಾಲು ಒಕ್ಕೂಟದಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ನೂರಾರು ಕೋಟಿ ಕದ್ದವರು ಯಾರು ಎಂಬುದು ಸಾರ್ವಜನಿಕರಿಗೆ ತಿಳಿಯಬೇಕಿದೆ ಬಡವರ ಹಣವನ್ನು ತಿಂದು ರಿಯಲ್ ಎಸ್ಟೇಟ್ ದಂದೆ ಜೊತೆಗೆ ರಾಜಕೀಯ ಮಾಡುತ್ತಿರುವ ಎರಡು ಸಂಸ್ಥೆಗಳ ರಾಜಕೀಯ ವ್ಯಕ್ತಿಗಳು ಹಾಗೂ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಬಡವರ ಸಂಸ್ಥೆಗಳನ್ನು ಉಳಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಉಳುಮೆ ಮಾಡಿ ಕೃಷಿ ಕ್ಷೇತ್ರದ ಮೇಲೆ ಬಂಡವಾಳ ಹಾಕಿ ಬೆವರು ಸುರಿಸದ ರಾಜಕೀಯ ವ್ಯಕ್ತಿಗಳು ರೈತರ ಸಂಸ್ಥೆಯಾದ ಡಿ.ಸಿ.ಸಿ ಬ್ಯಾಂಕ್‌ನಲ್ಲಿ ಲೂಟಿ ಮಾಡುತ್ತಾರೆ ಜೊತೆಗೆ ಹಸು ಖರಿದಿ ಮಾಡಲ್ಲ ಗಂಜಲ ಸಗಣಿ ವಾಸನೆ ಪಡೆದುಕೊಳ್ಳಲ್ಲ ಆದರೂ ತಮ್ಮ ಕುಟುಂಬ ಐಶಾರಾಮಿ ಜೀವನಕ್ಕೆ ಹಾಲು ಒಕ್ಕೂಟದಲ್ಲಿ ಲಕ್ಷಾಂತರ ಮಹಿಳೆಯರ ಬೆವರ ಹನಿಯ ಹಸುವಿನ ಸಗಣಿ ತಿಂದು ಕೋಟಿ ಕೋಟಿ ಲೂಟಿ ಮಾಡುವ ಭ್ರಷ್ಠ ವ್ಯವಸ್ಥೆಯ ಜನಪ್ರತಿನಿದಿಗಳಿಗೆ ಅಧಿಕಾರಿಗಳಿಗೆ ಬಡವರ ಕಣ್ಣೀರಿನ ಶಾಪ ತಟ್ಟುವ ಕಾಲ ದೂರವಿಲ್ಲ ಎಂದು ಸಹಕಾರ ಸಚಿವರಿಗೆ ಮನವರಿಕೆ ಮಾಡಿದರು.

ಎರಡು ಸಂಸ್ಥೆಯಲ್ಲಿ ನಡೆದಿರುವ ನೂರಾರು ಕೋಟಿ ಹಗರಣವನ್ನು ಗಂಬೀರವಾಗಿ ಪರಿಗಣಿಸಿ ಕುಂಬಳಕಾಯಿ ಕದ್ದ ಪ್ರಕರಣದಂತೆ ಈ ಹಗರಣವನ್ನು ಸಿ.ಬಿ.ಐ ಗೆ ಒಪ್ಪಿಸಿ ಉಪ್ಪು ತಿಂದಿರುವವರಿಗೆ ಬಹಿರಂಗವಾಗಿ ಸಾರ್ವಜನಿಕವಾಗಿ ನೀರು ಕುಡಿಸಿ ಬಡವರ ಸಂಸ್ಥೆಗಳನ್ನು ಉಳಿಸಬೇಕು ಇಲ್ಲವಾದರೆ ಕುಂಬಳಕಾಯಿಗಳ ಸಮೇತ ಕಳ್ಳರನ್ನು ಪತ್ತೆ ಹಚ್ಚುವಂತೆ ಮುಖ್ಯಮಂತ್ರಿಗಳ ಮನೆ ಮುಂದೆ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಹಕಾರ ಸಚಿವ ರಾಜಣ್ಣ, ಎರಡು ಸಂಸ್ಥೆಗಳ ಹಗರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವ ಜೊತೆಗೆ ಬಡವರ ಹಣವನ್ನು ದುರುಪಯೋಗ ಪಡಿಸಿಕೊಂಡಿರುವವರು ಎಷ್ಟೇ ಪ್ರಭಾವಿಗಳಾದರೂ ರಕ್ಷಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಮನವಿ ನೀಡುವಾಗ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಗೀರೀಶ್, ಪುತ್ತೇರಿ ರಾಜು, ಮುಂತಾದವರಿದ್ದರು.

Leave a Reply

Your email address will not be published. Required fields are marked *