ತಾಲ್ಲೂಕಿನಲ್ಲಿ 220 ಮಂದಿಗೆ ಮನೆಯಿಂದಲೇ ಮತದಾನಕ್ಕೆ ವ್ಯವಸ್ಥೆ- ಚುನಾವಣಾಧಿಕಾರಿ ಎನ್. ತೇಜಸ್ ಕುಮಾರ್

ವಿಧಾನಸಭಾ ಕ್ಷೇತ್ರದ 276 ಮತಗಟ್ಟೆಗಳ ವ್ಯಾಪ್ತಿಯ 23 ಸೆಕ್ಟರ್ ಗಳಲ್ಲಿ ಒಟ್ಟು‌ 220 ಮಂದಿ ಹಿರಿಯ ನಾಗರಿಕರು(80 ವರ್ಷ ಮೆಲ್ಪಟ್ಟವರು) ಹಾಗೂ ವಿಶೇಷಚೇತನರಿಗೆ ಮನೆಯಿಂದ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿ ಎನ್.ತೇಜಸ್ ಕುಮಾರ್ ಹೇಳಿದರು.

ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ‌ ಮಾತನಾಡಿದ ಅವರು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟವರು‌ 5004 ಇದ್ದಾರೆ. 3327 ಮಂದಿ‌ ವಿಕಲಚೇತನರಿದ್ದಾರೆ. ಮತಗಟ್ಟೆಗೆ ಬರಲಾಗದ 220 ಜನರಿಗೆ 12D ಫಾರಂ ನೀಡಿ, ವಾಪಸ್ ತರಿಸಿಕೊಂಡಿದ್ದೇವೆ.‌ ಏ.29 ಹಾಗೂ 30 ರಂದು ಮತದಾರರ ಮನೆಗೆ ಹೋಗಿ ಮತದಾನ‌ ಮಾಡಿಸಲಾಗುವುದು. ಮತದಾನದ ಗೌಪ್ಯತೆ ಕಾಪಾಡಲಾಗುವುದು ಎಂದು ಹೇಳಿದರು.

ಮನೆಯಿಂದ ಮತದಾನಕ್ಕಾಗಿ 18 ಬಸ್ ರೂಟ್ ಗುರುತಿಸಿದ್ದು, 18 ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ ಮತಗಟ್ಟೆ ಅಧಿಕಾರಿ, ಮೈಕ್ರೊ ಅಬ್ಸರ್ವರ್ , ವಿಡಿಯೊಗ್ರಾಫರ್, ಪೊಲೀಸರನ್ನು ಒಳಗೊಂಡ ತಂಡಗಳು ಕಾರ್ಯನಿರ್ವಹಿಸಲಿವೆ. ಕಂದಾಯ ನಿರೀಕ್ಷಕ, ಉಪ ತಹಶೀಲ್ದಾರ್, ಗ್ರಾಮ ಲೆಕ್ಕಿಗರು ತಂಡದಲ್ಲಿ ಇರುವರು. ಪ್ರತ್ಯೇಕ‌ ಕಂಫಾರ್ಟ್‌ಮೆಂಟ್ ಸಿದ್ದಪಡಿಸಿ ಮತ ಚಲಾವಣೆ ಮಾಡಿಸಲಾಗುವುದು ಎಂದು ವಿವರಿಸಿದರು.

ಉಳಿದಂತೆ ಎಲ್ಲ ಮತಗಟ್ಟೆಗಳಲ್ಲಿ ರ‌್ಯಾಂಪ್, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 2,14,166 ಮತದಾರರಿದ್ದಾರೆ. 58 ಮಂದಿ ಸೇವಾ ಮತದಾರರಿದ್ದಾರೆ ಎಂದು ಹೇಳಿದರು.

ಚುನಾವಣೆಗೆ ಸಂಬಂಧಿಸಿದಂತೆ ಸಿ-ವಿಜಲ್ ಆ್ಯಪ್ ಮುಖಾಂತರ ಬಂದ ದೂರುಗಳನ್ನು ಪರಿಹರಿಸಲಾಗಿದೆ. ಚುನಾವಣೆ ಭದ್ರತೆಗೆ 1325 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 42 ಬಸ್ ಮಾರ್ಗ ಸೇರಿ 58 ರೂಟ್ ಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.

79 ಮತಗಟ್ಟೆಗಳು ನಗರಸಭೆ ವ್ಯಾಪ್ತಿಯಲ್ಲಿ ಬರಲಿವೆ. ಉಳಿದೆಲ್ಲಾ ಮತಗಟ್ಟೆಗಳು ಗ್ರಾಮಾಂತರ ಪ್ರದೇಶದಲ್ಲಿವೆ. ಮನೆಯಿಂದ ಮತದಾನ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮುಗಿಸುತ್ತೇವೆ‌ ಎಂದರು.

Leave a Reply

Your email address will not be published. Required fields are marked *