ಮುಂದಿನ 3 ತಿಂಗಳುಗಳ ಕಾಲ ಜಿಲ್ಲೆಯಲ್ಲಿ ಸಂಭವಿಸಬಹುದಾದ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಅಗತ್ಯ ಕ್ರಮವಹಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಬರ ಪರಿಸ್ಥಿತಿ ನಿವಾರಣೆಗೆ ತಕ್ಷಣ ಪರಿಹಾರ ಒದಗಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಿ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 04 ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಕಳೆದ 3 ರಿಂದ 5 ವರ್ಷಗಳಿಂದ ಹೆಚ್ಚಾಗಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುವ ಜನವಸತಿಗಳ ಆಧಾರದಲ್ಲಿ ಪ್ರಸಕ್ತ ವರ್ಷದ ಬೇಸಿಗೆ ಸಮಯದಲ್ಲಿ ಮಾರ್ಚ್ ರಿಂದ ಮೇ 2025 ರ ಅಂತ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ 98 ಜನವಸತಿಗಳನ್ನು ಗುರುತಿಸಲಾಗಿದ್ದು, 234 ಖಾಸಗಿ/ ರೈತರ ಕೊಳವೆ ಬಾವಿಗಳನ್ನು ಗುರುತಿಸಿ ಪರ್ಯಾಯವಾಗಿ ಕುಡಿಯುವ ನೀರು ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ JJM ಯೋಜನೆಯಡಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅವಶ್ಯಕವಿರುವ ಮೊತ್ತದ ತುರ್ತು ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ.
ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಕ್ರಮ ವಹಿಸಿ ಮೇವಿನ ಬೀಜ ಕಿಟ್ ಗಳನ್ನು ರೈತರಿಗೆ ಪೂರೈಸಿ, ಈಗಾಗಲೇ ಗೋಶಾಲೆಗಳಲ್ಲಿ ಅಂದಾಜು 3 ಲಕ್ಷ ಟನ್ ರಷ್ಟು ಮೇವು ಮೇವು ಸಂಗ್ರಹಿಸಿಡಲಾಗಿದೆ ಎಂದರು.
ಸಭೆಯಲ್ಲಿ ಉಪ ಕಾರ್ಯದರ್ಶಿ ಟಿ ಕೆ ರಮೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.