ಕೊನಘಟ್ಟ ಗ್ರಾಮದಲ್ಲಿ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮನವರ 33ನೇ ವರ್ಷದ ಕರಗ ಮಹೋತ್ಸವ

ತಾಲೂಕಿನ ಕೊನಘಟ್ಟ ಗ್ರಾಮದ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮನವರ 33ನೇ ವರ್ಷದ ಕರಗ ಮಹೋತ್ಸವ ಕಾರ್ಯಕ್ರಮಕ್ಕೆ ಆದಿಶಕ್ತಿ ಮಹಾಸಂಸ್ಥಾನ ಮಠದ ಶ್ರೀಶ್ರೀಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಗುರುವಾರ ಅದ್ಧೂರಿಯಾಗಿ ನೆರವೇರಿತು.

ಈ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ವಹ್ನಿಕುಲ (ತಿಗಳರ) ಸಂಘದ ನಿರ್ದೇಶಕರಾದ ಕೆ.ಎಂ. ಮಂಜನಾಥ್, ಕೊನಘಟ್ಟ ಹಾಗೂ ಅಕ್ಕ ಪಕ್ಕದ ಗ್ರಾಮಗಳ ಗ್ರಾಮಸ್ಥರು, ಸರ್ವ ಸಮುದಾಯಗಳ ಮುಖಂಡರು ಒಟ್ಟಾಗಿ ಸೇರಿ ಅತ್ಯಂತ ಸಂಭ್ರಮ ಹಾಗೂ ಸಂತೋಷದಿಂದ ಪಕ್ಷಾತೀತವಾಗಿ ಮಹೋತ್ಸವವನ್ನು ಆಚರಿಸುತ್ತಿರುವುದು ವಿಶೇಷ ಸಂಗತಿಯಾಗಿದೆ, ಈ ಬಾರಿ ಶ್ರೀ ವಿನಾಯಕ ಮುತ್ತಿನ ಪಲ್ಲಕ್ಕಿ ಉತ್ಸವ,ಶ್ರೀ ಕೃಷ್ಣದೇವರ ಮುತ್ತಿನ ಪಲ್ಲಕ್ಕಿ ಉತ್ಸವ,ಶ್ರೀ ಆಂಜನೇಯ ಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ,ಕೊನಘಟ್ಟ ಶ್ರೀ ವೀರಭದ್ರ ಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ,ಶ್ರೀ ಭೀಮನ ಮುತ್ತಿನ ಪಲ್ಲಕ್ಕಿ ಉತ್ಸವ ಸೇರಿದಂತೆ ಹಲವು ಉತ್ಸವಗಳು ಅದ್ದೂರಿಯಾಗಿ ನಡೆದವು ಎಂದರು.

ವಹ್ನಿಕುಲ ಕ್ಷತ್ರಿಯ ಗುರುಪೀಠ ಆದಿಶಕ್ತಿ ಮಹಾಸಂಸ್ಥಾನ ಮಠದ ಶ್ರೀಶ್ರೀಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳು ಕಾರ್ಯಕ್ರಮ ದಿವ್ಯ ಸಾನಿಧ್ಯವಹಿಸಿ ಮಹೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳನ್ನು ಆಶೀರ್ವದಿಸಿದರು.

ದೇವಾಲಯದಲ್ಲಿ ವಿಶೇಷವಾಗಿ ಹೋಮ, ದೇವಾಲಯಕ್ಕೆ ಸುಣ್ಣ, ಬಣ್ಣ, ಪುಣ್ಯಾಹ ಗುರುಡ ಧ್ವಜಾರೋಹಣ, ಪೂಂಗಲ್ ಸೇವೆ,ಹಸಿಕರಗ, ವರ್ಣರಂಜಿತ ದೀಪಾಲಂಕಾರಗಳಿಂದ ಕೂಡಿದ ಆರತಿಗಳ ಅಗ್ನಿಕುಂಡ ಪ್ರವೇಶ, ಕೀಲು ಕುದುರೆ ನೃತ್ಯ,ವಾದ್ಯಗಳು, ಕಲ್ಯಾಣೋತ್ಸವ, ಕಣದ ಬಳಿ ಬಳೆ ತೊಡಿಸುವ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾರ್ಚ್ 9 ರಿಂದ 16 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಸಾವಿರಾರು ಸಂಖ್ಯೆಯಲ್ಲಿ ತಾಲ್ಲೂಕಿನ ಜನತೆ ಕರಗ ಮಹೋತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಕರಗ ಮಹೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ ತಾಲೂಕಿನ ಜನತೆಗೆ ಕೊನಘಟ್ಟ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮಸೇವಾ ಟ್ರಸ್ಟ್ (ರಿ.) ವಹ್ನಿಕುಲ (ತಿಗಳರು) ಗೌಡರು, ಯಜಮಾನರು, ಗಣಾಚಾರರು ಕೋಲುಕಾರ್ ಕುಲಸ್ಥರು ಹಾಗೂ ಕುಮಾರ ಮಕ್ಕಳು ಹಾಗೂ ಕೊನಘಟ್ಟ ಹಾಗೂ ಅಕ್ಕಪಕ್ಕ ಗ್ರಾಮಗಳ ಗ್ರಾಮಸ್ಥರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!