ಕಾಮೇನಹಳ್ಳಿ(ದೊಡ್ಡಬಳ್ಳಾಪುರ): ತಾಲೂಕಿನ ಸಾಸಲು ಹೋಬಳಿಯಲ್ಲಿನ ಕಾಮೇನಹಳ್ಳಿಯ ಇತಿಹಾಸ ಪ್ರಸಿದ್ಧ ಗುಟ್ಟೆ ಲಕ್ಷ್ಮೀನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ರಥೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು.
ಲಕ್ಷ್ಮೀನರಸಿಂಹ ಸ್ವಾಮಿಯ ಉತ್ಸವ ಮೂರ್ತಿ ಹೊತ್ತ ರಥವನ್ನು ಜಯಘೋಷಣೆಗಳೊಂದಿಗೆ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿ, ಸ್ವಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ನಂತರ 12.05 ನಿಮಿಷಕ್ಕೆ ಸರಿಯಾಗಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಜಯಘೋಷಣೆಗಳನ್ನು ಕೂಗುವುದರ ಮೂಲಕ ರಥವನ್ನು ಎಳೆಯಲಾಯಿತು. ಉತ್ಸವ ಮೂರ್ತಿ ಹೊತ್ತ ತೇರಿಗೆ ಭಕ್ತರು ಭಕ್ತಿಯಿಂದ ಬಾಳೆಹಣ್ಣು, ದವನ ಸಮರ್ಪಿಸಿ ಭಕ್ತಿ ಮೆರೆದರು.
ಇದೇ ಮೊದಲ ಬಾರಿಗೆ ಗುಟ್ಟೆ ಶ್ರೀ ಲಕ್ಷ್ಮೀ ನರಸಿಹ ಸ್ವಾಮಿ ರಥೋತ್ಸವ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಗಿತ್ತು. ವಿವಿಧ ಜಿಲ್ಲೆಗಳು, ಅಕ್ಕಪಕ್ಕದ ತಾಲೂಕುಗಳಿಂದ ಭಕ್ತ ಸಾಗರ ಹರಿದುಬಂದು ದೇವರ ದರ್ಶನ ಪಡೆದರು.
ಡೊಳ್ಳು ಕುಣಿತ, ಕೀಲುಕುದುರೆ ಕುಣಿತ, ಕಂಸಾಳೆ ನೃತ್ಯ ಪ್ರದರ್ಶನಗಳು ನೋಡುಗರ ಕಣ್ಮನ ಸೆಳೆದವು. ಭಕ್ತ ಗಣಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ದೊಡ್ಡಬಳ್ಳಾಪುರದಿಂದ ಸುಮಾರು 25ಕಿಮೀ, ಸಾಸಲು ಹಾಗೂ ಆರೂಢಿಯಿಂದ ಸುಮಾರು 7 ಕಿಮೀ ದೂರದಲ್ಲಿರುವ ಗುಟ್ಟೆ ಲಕ್ಷ್ಮೀನರಸಿಂಹಸ್ವಾಮಿ ಧಾರ್ಮಿಕ ಸ್ಥಳವಾಗಿ ಪ್ರಖ್ಯಾತವಾಗಿದ್ದು, ಸುಮಾರು ವರ್ಷಗಳ ಹಿಂದೆ ಸ್ಥಾಪಿತವಾದ ದೇವಸ್ಥಾನ ದಿನೇದಿನೆ ಅಭಿವೃದ್ಧಿಗೊಂಡು ಈಗ ಬೆಟ್ಟದೆ ಮೇಲೆ ಸುಸಜ್ಜಿತ ದೇಗುಲ ಹೊಂದಿದೆ. ಸುಂದರವಾದ ಗೋಪುರ, ಕಲ್ಲು ಮಂಟಪದ ಆವರಣವಿರುವ ಗರ್ಭಗುಡಿಯಲ್ಲಿ ಮೂಲ ವಿಗ್ರಹದೊಂದಿಗೆ ಗುಟ್ಟೆ ಲಕ್ಷ್ಮೀನರಸಿಂಹ ಸ್ವಾಮಿ ಮತ್ತು ಕೆಳಗಡೆ ಲಕ್ಷ್ಮಮ್ಮ ಮತ್ತು ಆಂಜಿನೇಯ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ.
ಇಲ್ಲಿ ಪ್ರತೀ ಶನಿವಾರ ಪೂಜೆ ಪುನಾಸ್ಕಾರಗಳನ್ನು ನಡೆಸಲಾಗುತ್ತದೆ. ಹುಣ್ಣಿಮೆ ಮತ್ತು ಶ್ರಾವಣ ಮಾಸದಲ್ಲಿ ಪ್ರತಿದಿನ ಪೂಜೆ ಪುರಸ್ಕಾರಗಳು ನಡೆಯಲಿದ್ದು ಸಾವಿರಾರು ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ.