ಕರ್ನಾಟಕದಲ್ಲಿ ಇಸ್ರೇಲ್ ಮಹಿಳೆಯ ಮೇಲಿನ ಅತ್ಯಾಚಾರ……..
ಸಾರ್ವಜನಿಕರೇ, ಇದು ನಿಮ್ಮ ಹೆಸರಿಗೂ ಕಳಂಕ ಎಂಬುದನ್ನು ಮರೆಯದಿರಿ……..
ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಹತ್ತಿರದ ಪ್ಲೇ ಹೋಂ ಅಥವಾ ರೆಸಾರ್ಟ್ ನಲ್ಲಿ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಒಬ್ಬ ವ್ಯಕ್ತಿಯ ಕೊಲೆಯಾಗಿದೆ. ಆ ಹೆಣ್ಣು ಮಕ್ಕಳಲ್ಲಿ ಒಬ್ಬರು ಇಸ್ರೇಲ್ ನಾಗರಿಕರು ಎಂಬುದು ಮತ್ತಷ್ಟು ಗಾಬರಿ ಹಾಗೂ ಆತಂಕಕಾರಿ ವಿಷಯ…..
ನಿಜಕ್ಕೂ ಕರ್ನಾಟಕ ತಲೆತಗ್ಗಿಸುವಂತಹ ವಿಷಯವಿದು. ರನ್ಯಾ ಎಂಬ ಮಾಜಿ ಸಿನಿಮಾ ನಟಿಯ ಚಿನ್ನದ ಕಳ್ಳಸಾಗಾಣಿಕೆ, ವಿಧಾನಸಭೆಯ ಅಧಿವೇಶನ ಮುಂತಾದ ಸುದ್ದಿಗಳ ಪ್ರಾಮುಖ್ಯತೆಯಲ್ಲಿ ಈ ವಿಷಯ ಅಷ್ಟಾಗಿ ಮಾಧ್ಯಮಗಳು ಗಮನಹರಿಸಿಲ್ಲ……
ಇಡೀ ಸರ್ಕಾರ ಮತ್ತು ಸಮಾಜ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಾದ ಸಮಯ ಬಂದಿದೆ. ಪ್ರವಾಸಿಗಳಾಗಿ ಭಾರತ ವೀಕ್ಷಿಸಲು ಅದರಲ್ಲೂ ಕರ್ನಾಟಕದ ಹಂಪಿ ಸುತ್ತಮುತ್ತ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು, ಅಲ್ಲಿನ ಶಿಲ್ಪ ಕಲೆಯನ್ನು ನೋಡಲು ಸಾವಿರಾರು ಕಿಲೋಮೀಟರ್ ಗಳಿಂದ ಬರುವ ಪ್ರವಾಸಿಗರಿಗೆ ಈ ರೀತಿಯ ಹಿಂಸೆ ಮಾಡುವುದು ಇಡೀ ಕರುನಾಡ ಸಂಸ್ಕೃತಿಗೆ ಅವಮಾನವಾದಂತೆ……
ಕಾರಣವೇನೇ ಇರಲಿ, ಸಂದರ್ಭ ಸನ್ನಿವೇಶ ಏನೇ ಇರಲಿ, ಅತ್ಯಾಚಾರಿಗಳು ಯಾವುದೇ ಮಾನಸಿಕ ಪರಿಸ್ಥಿತಿಯಲ್ಲಿ ಇರಲಿ ಅದು ಯಾವುದೂ ಈ ಘಟನೆಗೆ ಸಮರ್ಥನೆ ಅಥವಾ ನೆಪವಾಗಬಾರದು. ಎಂತಹ ಕುಡುಕರು, ವಿಕೃತಕಾಮಿಗಳಾದರು ಒಂದಷ್ಟು ಸಾಮಾನ್ಯ ಪ್ರಜ್ಞೆ ಸದಾ ಜಾಗೃತವಾಗಿರುತ್ತದೆ. ತನ್ನ ಬದುಕಿನ ಬಗ್ಗೆ, ಸಾವಿನ ಬಗ್ಗೆ ಭಯ ಇದ್ದೇ ಇರುತ್ತದೆ. ಆದರೆ ಈಗ ಅವರು ಬಹಿರಂಗವಾಗಿ ಇಷ್ಟೊಂದು ರಂಪಾಟ ಮಾಡಿರುವುದು ನೋಡಿದರೆ ಸರ್ಕಾರದ ಬಗ್ಗೆ, ಕಾನೂನಿನ ಬಗ್ಗೆ, ಪೊಲೀಸ್ ವ್ಯವಸ್ಥೆಯ ಬಗ್ಗೆ, ಸಮಾಜದ ಬಗ್ಗೆ ಅವರಿಗೆ ಯಾವುದೇ ಹೆದರಿಕೆ ಇರುವಂತೆ ಕಾಣುತ್ತಿಲ್ಲ. ಇದು ಖಂಡಿತ ನಾಚಿಕೆಗೇಡಿನ ವಿಷಯ…..
ನಮ್ಮಲ್ಲಿ ಪೊಲೀಸ್ ವ್ಯವಸ್ಥೆ ಎಂದರೆ ಅಪರಾಧಿಗಳನ್ನು ಹಿಡಿಯುವುದು ಮಾತ್ರ ಎಂಬಂತೆ ಬಿಂಬಿತವಾಗಿದೆ. ಆದರೆ ನಿಜವಾದ ಆರಕ್ಷಣೆ ಎಂದರೆ ಅವರ ಮೊದಲ ಆದ್ಯತೆ ಅಪರಾಧಗಳನ್ನು ತಡೆಯುವುದೇ ಆಗಿರಬೇಕೇ ಹೊರತು ಅಪರಾಧಿಗಳನ್ನು ಹಿಡಿಯುವುದು ಎರಡನೇ ಆದ್ಯತೆಯಾಗಬೇಕು. ಏಕೆಂದರೆ ಕರ್ನಾಟಕದ ಮಟ್ಟಿಗೆ ರಾಜ್ಯ ಪೊಲೀಸರು ಅಪರಾಧಿಗಳನ್ನು ಹಿಡಿಯುವುದರಲ್ಲಿ ಇಡೀ ರಾಷ್ಟ್ರದಲ್ಲಿಯೇ ಪ್ರಖ್ಯಾತರಾಗಿದ್ದಾರೆ. ಆದರೆ ಅಪರಾಧಿಗಳನ್ನು, ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಫಲರಾಗಿರುವುದನ್ನು ಕಾಣುತ್ತಿದ್ದೇವೆ…
ಅದರಲ್ಲೂ ದರೋಡೆ, ಅತ್ಯಾಚಾರ, ಕೊಲೆ, ಮಾದಕವಸ್ತುಗಳ ಸಾಗಾಣಿಕೆಯ ನಿಯಂತ್ರಣದ ವಿಷಯದಲ್ಲಿ ಖಂಡಿತವಾಗಲೂ ಪೊಲೀಸ್ ವ್ಯವಸ್ಥೆ ವಿಫಲವಾಗಿರುವುದು ನಮ್ಮ ಕಣ್ಣ ಮುಂದೆಯೇ ಇದೆ…..
ಈ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯ ಸುಧಾರಣೆ ಹಾಗೂ ಇಡೀ ಸಮಾಜದ ಆತ್ಮಾವಲೋಕನದ ಅವಶ್ಯಕತೆ ಇದೆ. ಆಡಳಿತ ಯಂತ್ರದ ಪುನರ್ ನಿರ್ಮಾಣ ಮಾಡಬೇಕಾಗಿದೆ……
ಪೊಲೀಸ್ ಎಂದರೆ …..ಕಳ್ಳರನ್ನು ಹಿಡಿಯುವುದೋ, ಕಳ್ಳತನ ತಡೆಯುವುದೋ………..
ಪೊಲೀಸರ ಮೊದಲ ಆದ್ಯತೆ, ಮೊದಲ ಕರ್ತವ್ಯ, ಮೊದಲ ಕೆಲಸ, ಮೊದಲ ಆಶಯ ಅಪರಾಧಗಳನ್ನು ತಡೆಯುವುದೇ ಅಥವಾ ಅಪರಾಧಿಗಳನ್ನು ಪತ್ತೆ ಹಚ್ಚುವುದೇ………
ಒಂದು ವೇಳೆ ಅಪರಾಧಿಗಳನ್ನು ಪತ್ತೆ ಹಚ್ಚುವುದೇ ಮೂಲ ಉದ್ದೇಶವಾಗಿದ್ದರೆ ಇಲ್ಲಿಯವರೆಗಿನ ಅವರ ಕೆಲಸ ಮತ್ತು ಆ ವ್ಯವಸ್ಥೆ ತೃಪ್ತಿಕರ. ಒಂದು ವೇಳೆ ಅಪರಾಧಗಳನ್ನು ತಡೆಯುವುದು ಅವರ ಮೂಲ ಆಶಯವಾಗಿದ್ದರೆ ಅದರಲ್ಲಿ ಅವರು ಮತ್ತು ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದೇ ಹೇಳಬೇಕಾಗುತ್ತದೆ….
ಈಗಲೂ ಸರಗಳ್ಳತನ, ಪಿಕ್ ಪಾಕೆಟ್, ಮೊಬೈಲ್ ಕದಿಯುವುದು, ಮನೆಗಳ್ಳತನ, ಭ್ರಷ್ಟಾಚಾರ, ವಂಚನೆ, ಮೋಸ, ಕೊಲೆ, ಅತ್ಯಾಚಾರ, ಡ್ರಗ್ ಧಂದೆ ಎಲ್ಲವೂ ಹೆಚ್ಚು ಕಡಿಮೆ ದಿನನಿತ್ಯದ ಕಣ್ಣ ಮುಂದೆಯೇ ನಡೆಯುತ್ತಿರುವ ಅಪರಾಧಗಳು. ಪ್ರತಿ ಆರಕ್ಷಕ ಠಾಣೆಯಲ್ಲಿ ಈ ರೀತಿಯ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಕ್ರೈಮ್ ಬೀಟ್ ಸುದ್ದಿ ಮಾಧ್ಯಮಗಳ ನೆಚ್ಚಿನ – ಜನಪ್ರಿಯ ಕಾಲಂ ಮತ್ತು ಕಾರ್ಯಕ್ರಮ……..
ಉದಾಹರಣೆಗೆ ಡ್ರಗ್ ಮಾಫಿಯಾ ಏರ್ಪಡಿಸುವ ಪಾರ್ಟಿಗಳು ಆಕಾಶದಲ್ಲಿ ಅಥವಾ ಭೂಮಿಯ ಒಳಗಡೆ ನಡೆಯುವುದಿಲ್ಲ ಅಥವಾ ಅದು ಕಣ್ಣಿಗೆ ಕಾಣದ ವಿದ್ಯಮಾನವೂ ಅಲ್ಲ. ಒಂದು ದೊಡ್ಡ ಹೋಟೆಲ್ ಅಥವಾ ಐಷಾರಾಮಿ ಜಾಗದಲ್ಲಿ, ಅಡುಗೆಯವರು, ಸೆಕ್ಯುರಿಟಿ, ದೀಪಾಲಂಕಾರ ಸೇರಿ ನೂರಾರು ವಿವಿಧ ಕೆಲಸದ ಜನರ ಭಾಗವಹಿಸುವಿಕೆಯಿಂದ, ಗಣ್ಯ ವ್ಯಕ್ತಿಗಳು ಮತ್ತು ಅವರ ಸಹಾಯಕರು, ವಾಹನ ಚಾಲಕರು ಎಲ್ಲರೂ ಪ್ರತ್ಯಕ್ಷ ಅಥವಾ ಪರೋಕ್ಷ ಭಾಗವಾಗಿ, ಜೊತೆಗೆ ಸುಮಾರು 4/6 ಗಂಟೆಗಳಷ್ಟು ದೀರ್ಘಕಾಲ ಆಗಾಗ ನಡೆಯುತ್ತದೆ. ಇದನ್ನು ನಮ್ಮ ಪೋಲೀಸ್ ವ್ಯವಸ್ಥೆ ಕನಿಷ್ಟ ಪರಿಶೀಲಿಸುವುದಿಲ್ಲವೇ. ಅದರ ಬಳಿ ಮಾಹಿತಿ ಇರುವುದಿಲ್ಲವೇ, ಅದರ ಗೂಡಾಚಾರ ವ್ಯವಸ್ಥೆ ಏನು ಮಾಡುತ್ತಿರುತ್ತದೆ…………….
ಜೊತೆಗೆ ಅಲ್ಲಿನ ಸ್ಥಳೀಯ ಸರ್ಕಾರಿ ಆಡಳಿತ, ಜನ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಯಾರಿಗೂ ಏನೂ ತಿಳಿದಿರುವುದಿಲ್ಲವೇ, ಅದೇನು ಸೈನ್ಯದಷ್ಟು ಮಹತ್ವದ ಕಾರ್ಯಚರಣೆಯೇ……..
ಎಷ್ಟೋ ವರ್ಷಗಳ ಬಹಿರಂಗ ದಂಧೆಯನ್ನು ಎಂದೋ ಒಂದು ಬಾರಿ ದಾಳಿ ಮಾಡಿದರೆ ಪ್ರಯೋಜನವೇನು. ಹಾಗಾದರೆ ಇಷ್ಟು ದಿನಗಳು ಅವ್ಯಾಹತವಾಗಿ ನಡೆದಿರುವ ದಂಧೆಗೆ ಜವಾಬ್ದಾರರು ಯಾರು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತದಂತೆ ಯಾರಿಗೂ ಕಾಣಬಾರದೆಂದು. ಹಾಗೆಯೇ ವ್ಯವಸ್ಥೆಯೂ ಕಣ್ಣು ಮುಚ್ಚಿಕೊಂಡು ಕಾರ್ಯ ನಿರ್ವಹಿಸುತ್ತಿದೆಯೇ ಅಥವಾ ಜನರು ಕಣ್ಣು ಮುಚ್ಚಿಕೊಂಡಿದ್ದಾರೆಯೇ …….
ಭ್ರಷ್ಟಾಚಾರ ವಿಷಯದಲ್ಲೂ ಅಷ್ಟೇ. ಪ್ರಾರಂಭದ ಹಂತದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನೂರಾರು, ಸಾವಿರಾರು ಕೋಟಿ ಅವ್ಯವಹಾರದ ನಂತರ ದಾಳಿ ಮಾಡಿ ಬಂಧಿಸಿದರೆ ಇಷ್ಟು ದಿನ ಇವರು ಮಾಡುತ್ತಿದ್ದುದಾದರು ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕಾಏಕಿ ಯಾರೂ ಕೋಟಿ ಕೋಟಿ ಹಣ ಮಾಡುವುದು ಸಾಧ್ಯವಿಲ್ಲ. ಕೆಲವು ವರ್ಷಗಳ ಅವ್ಯವಹಾರ ಇದರ ಹಿಂದೆ ಇರುತ್ತದೆ. ಒಬ್ಬ ದೊಡ್ಡ ರೌಡಿ ಅಥವಾ ಒಂದು ಸಮಾಜ ದ್ರೋಹಿ ಕೆಲಸ ದಿಢೀರನೆ ಬೆಳವಣಿಗೆ ಹೊಂದುವುದಿಲ್ಲ. ಅದರ ಹಿಂದೆಯೇ ಅದಕ್ಕೆ ಬೇಕಾದ ಕುಖ್ಯಾತ ತಂತ್ರಗಳು ಅಡಗಿರುತ್ತದೆ. ಪೋಲೀಸ್ ವ್ಯವಸ್ಥೆ ಮುಖ್ಯವಾಗಿ ಅದನ್ನು ಪತ್ತೆ ಹಚ್ಚುವ ದಕ್ಷತೆ ರೂಪಿಸಿಕೊಳ್ಳಬೇಕಲ್ಲವೇ….
ಹೌದು, ಪೋಲೀಸ್ ಅಧಿಕಾರಿಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದ ರಾಜಕೀಯ ವ್ಯವಸ್ಥೆ ನಮ್ಮಲ್ಲಿದೆ. ಕೆಳಹಂತದ ಪೋಲೀಸ್ ಅಧಿಕಾರಿಗಳಿಗೆ ಇದರಿಂದ ವಿನಾಯಿತಿ ನೀಡಬಹುದು. ಆದರೆ ಹಿರಿಯ ಐಪಿಎಸ್ ಅಧಿಕಾರಿಗಳೇ ರಾಜಕಾರಣಿಗಳ ದಾಸರಾದರೆ ಇಡೀ ವ್ಯವಸ್ಥೆ ಕುಸಿಯುತ್ತದೆ. ನ್ಯಾಯ, ಕಾನೂನು, ದೇವರಂತೆ ನಂಬಿಕೆ ಕಳೆದುಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ನ್ಯಾಯಾಂಗ ಕೂಡ ಹಿರಿಯ ಅಧಿಕಾರಿಗಳ ನೆರವಿಗೆ ಬರುತ್ತಿದೆ……
ಅನಿರೀಕ್ಷಿತವಾಗಿ ನಡೆಯುವ ಅಪರಾಧಗಳಲ್ಲಿ ಅವರನ್ನು ಪತ್ತೆ ಹಚ್ಚುವುದು ಮುಖ್ಯವಾಗುತ್ತದೆ.
ಆದರೆ ವ್ಯವಸ್ಥಿತವಾಗಿ ಮತ್ತು ನಿರಂತರವಾಗಿ ನಡೆಯುವ ದಂಧೆಗಳನ್ನು ತಡೆಯದಿದ್ದರೆ ನೇರ ಹೊಣೆ ಪೋಲೀಸರೆ ಹೊರಬೇಕು. ರಾಜಕೀಯ ಒತ್ತಡ ಎಂಬುದು ಒಂದು ನೆಪ ಅಥವಾ ಅವರ ಅಪ್ರಾಮಾಣಿಕತೆಗೆ ಒಂದು ಉದಾಹರಣೆ. ಅಷ್ಟೂ ಸಾಮಾನ್ಯ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಪೋಲೀಸ್ ವ್ಯವಸ್ಥೆ ನಗೆಪಾಟಲಿಗೆ ಈಡಾಗುತ್ತದೆ…..
ಜನರ ತೆರಿಗೆ ಹಣವನ್ನು ಸಂಬಳದ ರೂಪದಲ್ಲಿ ತಿನ್ನುವವರು, ಅದರಿಂದಲೇ ತಮ್ಮ ಮತ್ತು ತಮ್ಮ ಕುಟುಂಬದ ಬದುಕು ಕಟ್ಟಿಕೊಳ್ಳುವವರು ರಾಜಕಾರಣಿಗಳಿಗಿಂತ ಕಾನೂನಿಗೆ ಗೌರವ ಕೊಟ್ಟು ಕೆಲಸ ಮಾಡದಿದ್ದರೆ ಈ ಸಮಾಜಕ್ಕೆ ಅವರು ಮಾಡುವ ದ್ರೋಹ ಎಂದು ಬಗೆಯಬೇಕು…..
ವ್ಯವಸ್ಥೆ ಇರುವುದೇ ಹೀಗೆ, ನಾವು ಸಹ ವರ್ಗಾವಣೆಗೆ ಅಪಾರ ಲಂಚ ಕೊಡಬೇಕು. ಇಡೀ ವ್ಯವಸ್ಥೆಯೇ ಭ್ರಷ್ಟಗೊಂಡಿರುವಾಗ ಪೊಲೀಸರನ್ನು ದೂರುವುದು ಯಾವ ನ್ಯಾಯ ಎಂಬ ಸಿನಿಕತನದ ಪ್ರಶ್ನೆ ಪೊಲೀಸ್ ವಲಯದಿಂದ ಬರಬಹುದು. ಕಾನೂನು ಸುವ್ಯವಸ್ಥೆಯ ರಕ್ಷಕರೇ ಇಷ್ಟು ಅಸಹಾಯಕ ಅಭಿಪ್ರಾಯ ವ್ಯಕ್ತಪಡಿಸಿದರೆ ಇನ್ನು ಸಾಮಾನ್ಯರ ಪಾಡೇನು. ಆಗ ಸಾಮಾನ್ಯರ ಸಾಮಾನ್ಯ ತಪ್ಪುಗಳು ಸ್ವೀಕಾರಾರ್ಹ ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ.
ಪೊಲೀಸ್ ವ್ಯವಸ್ಥೆ ನಿದ್ರೆಯಿಂದ ಎಚ್ಚರಗೊಂಡಂತೆ ಯಾವಾಗಲೋ ಒಮ್ಮೊಮ್ಮೆ ಚಟುವಟಿಕೆಯಿಂದ ಇರುವುದಲ್ಲ. ಅಪರಾಧಗಳನ್ನು ಹಿಡಿಯುವ ಚಾಕಚಕ್ಯತೆಗಿಂತ ಅಪರಾಧಗಳನ್ನು ತಡೆಗಟ್ಟುವುದು ಮತ್ತು ಪ್ರಾರಂಭದ ಹಂತದಲ್ಲೇ ಅದನ್ನು ಬುಡ ಸಮೇತ ನಿರ್ಮೂಲನೆ ಮಾಡುವ ದಿಕ್ಕಿನಲ್ಲಿ ಹೆಚ್ಚು ಕಾರ್ಯೋನ್ಮಖವಾಗಬೇಕಿದೆ….
ಹೌದು, ಪೊಲೀಸ್ ವ್ಯವಸ್ಥೆಗೆ ನ್ಯಾಯಾಂಗ ವ್ಯವಸ್ಥೆ ಪೂರಕವಾಗಿಲ್ಲ. ಪೊಲೀಸರ ಶ್ರಮ ಹೊಳೆಯಲ್ಲಿ ಹುಣಿಸಿ ಹಣ್ಣು ತೊಳೆದಂತೆ ಕುಖ್ಯಾತರು, ಶ್ರೀಮಂತರು, ಬಲಶಾಲಿಗಳು ಬಹುಬೇಗ ಆರೋಪಗಳಿಂದ ಬಚಾವಾಗುತ್ತಾರೆ. ವಕೀಲಿಕೆಯ ವ್ಯವಸ್ಥೆಯಲ್ಲಿಯೂ ಸಾಕಷ್ಟು ಸುಧಾರಣೆ ಮಾಡುವ ಅವಶ್ಯಕತೆ ಇದೆ……….
ಇಲ್ಲದಿದ್ದರೆ ಇಡೀ ವ್ಯವಸ್ಥೆ ಒಂದು ಕಳ್ಳ ಪೊಲೀಸ್ ಆಟದಂತೆ ನಡೆಯುತ್ತಲೇ ಇರುತ್ತದೆ. ಅದಕ್ಕೆ ಕೊನೆಯೇ ಇರುವುದಿಲ್ಲ ಮತ್ತು ದುರ್ಬಲರು ಸದಾ ಅನ್ಯಾಯಕ್ಕೆ ಒಳಗಾಗುತ್ತಲೇ ಇರುತ್ತಾರೆ…….
ಡ್ರಗ್ ದಂಧೆಗಳು, ಕ್ರಿಮಿನಲ್ ಚಟುವಟಿಕೆಗಳು, ಭ್ರಷ್ಟಾಚಾರ, ಮಾಧ್ಯಮಗಳು, ಪೊಲೀಸ್ ವ್ಯವಸ್ಥೆ ಎಲ್ಲವೂ ನಮ್ಮ ಸಮಾಜವನ್ನು ಒಂದು ನಾಟಕದ ಕಂಪನಿಯಂತೆ ಸಮಯಕ್ಕೆ ತಕ್ಕಂತ ಪಾತ್ರಗಳನ್ನು ನಿರ್ವಹಿಸುತ್ತಾ ಜನರನ್ನು ವಂಚಿಸುವ ದೊಡ್ಡ ಪ್ರಹಸನದ ವೇದಿಕೆ ಎಂದು ಕರೆಯಬೇಕಾಗುತ್ತದೆ. ಆದ್ದರಿಂದ ಇದನ್ನು ತಡೆಗಟ್ಟಲು, ಬದಲಾವಣೆ ಸಮಗ್ರವಾಗಿ ಮತ್ತು ಶೀಘ್ರವಾಗಿ ನಡೆಯಲು ಮನಸ್ಸುಗಳ ಅಂತರಂಗದ ಚಳವಳಿ ಮಾಡಬೇಕಾಗಿದೆ……..
ಇದರಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾರ್ವಜನಿಕರ ಪಾತ್ರವೂ ಇದೆ ಎಂಬುದನ್ನು ಮರೆಯಬಾರದು. ನಮ್ಮ ದುರಾಸೆ, ನಿರ್ಲಕ್ಷ್ಯ, ಅಜ್ಞಾನ ಮತ್ತು ವಿವೇಚನೆಯ ಕೊರತೆಯೂ ಇದಕ್ಕೆ ಒಂದು ಕಾರಣ ಎಂಬುದನ್ನು ಅರ್ಥಮಾಡಿಕೊಳ್ಳಬೇಕು…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ