ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತ- ಅಂಕದ ಓದಿಗಿಂತ ಜ್ಞಾನದ ಓದು ಮುಖ್ಯ- ಶಿಕ್ಷಣ ತಜ್ಞ ಗುರುರಾಜ ಕರ್ಜಗಿ 

ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಬಿಟ್ಟು, ಪೂರ್ವಭಾವಿ ತಯಾರಿ ಮಾಡಿಕೊಂಡು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತ ಲಭಿಸುತ್ತದೆ ಎಂದು ಖ್ಯಾತ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ದೇವರಾಜ ಅರಸು ವಿದ್ಯಾಸಂಸ್ಥೆಯ ಆರ್.ಎಲ್.ಜಾಲಪ್ಪ ಕಲಾಮಂದಿರದಲ್ಲಿ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಉತ್ತೇಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರೀಕ್ಷೆಗೆ ಸರಿಯಾಗಿ ತಯಾರಿ ಮಾಡಿಕೊಳ್ಳದಿದ್ದಾಗ ಭಯ ಬೀಳುವುದು ಸಾಮಾನ್ಯ. ಪರೀಕ್ಷೆಗಳ ಭಯದಿಂದಾಗಿ ಎಷ್ಟೋ ವಿದ್ಯಾರ್ಥಿಗಳು, ಓದಿದ್ದನ್ನು ಮರೆತು ಅನುತ್ತೀರ್ಣರಾಗುತ್ತಿದ್ದಾರೆ. ಆದ್ದರಿಂದ, ವಿದ್ಯಾರ್ಥಿಗಳು ಪರೀಕ್ಷೆಗಾಗಿ ನಿಯಮಿತವಾಗಿ ಓದುವ ಅಭ್ಯಾಸ ಕ್ರಮವನ್ನು ರೂಢಿಸಿಕೊಳ್ಳಬೇಕು. ಬೆಳಗಿನ ಜಾವ ಓದುವುದು ಉತ್ತಮ ಅಭ್ಯಾಸವಾಗಿದ್ದು, 45 ನಿಮಿಷ ಓದಿ, ಓದಿದ್ದನ್ನು ಮನನ ಮಾಡಿಕೊಳ್ಳಬೇಕು. ಓದಿದ್ದನ್ನು ಒಂದು ಬಾರಿ ಬರೆಯಬೇಕು. ಇನ್ನೂ ಮನನವಾಗದಿದ್ದರೆ ಮತ್ತೊಬ್ಬರಿಗೆ ಹೇಳಬೇಕು. ಅಧ್ಯಾಯವಾರುಪಟ್ಟಿ ಮಾಡಿಕೊಂಡು ಓದಬೇಕು ಎಂದು ಸೂಚಿಸಿದರು.

ಪರೀಕ್ಷೆಗಾಗಿ ಓದುವುದಕ್ಕಿಂತ ನಿಯಮಿತವಾಗಿ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದ್ದು, ಇದಕ್ಕೆ ನಮ್ಮ ದೇಹ ಮತ್ತು ಮನಸ್ಸಿಗೆ ವ್ಯಾಯಾಮ ಅಗತ್ಯವಾಗಿದೆ. ಮೆದುಳಿಗೆ ಆಮ್ಲಜನಕದ ಸರಬರಾಜು ಇಲ್ಲದಿದ್ದರೆ, ಮೆದುಳು ಗ್ರಹಿಸುವ ಶಕ್ತಿ ಕಳೆದುಕೊಳ್ಳುತ್ತದೆ. ಇದಕ್ಕಾಗಿ ಎರಡೂ ಕೈಗಳನ್ನು ಜೋಡಿಸುವ ಸಣ್ಣ ಆಕ್ಯೂಪ್ರೆಷರ್ ವ್ಯಾಯಾಮ ಮಾಡಬೇಕು. ಹೀಗೆ ನಿತ್ಯ 10 ನಿಮಿಷ ಈ ವ್ಯಾಯಾಮ ಮಾಡಬೇಕು ಎಂದರು.

ಪರೀಕ್ಷೆ ವೇಳೆಯಲ್ಲಿ ನಿದ್ದೆಗೆಟ್ಟು ಓದಿ ಹೆಚ್ಚು ಒತ್ತಡಕ್ಕೊಳಗಾಗಬಾರದು. ಲವಲವಿಕೆಯಿಂದ ಪರೀಕ್ಷೆ ಕೆಂದ್ರಕ್ಕೆ ಹೋಗಬೇಕು. ಪರೀಕ್ಷೆಗೆ ಹೋಗುವ ಮುನ್ನ ತಂದೆ-ತಾಯಿಯ ಆಶೀರ್ವಾದ ಪಡೆದರೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ. ಇನ್ನು ಪರೀಕ್ಷಾ ಕೇಂದ್ರದಲ್ಲಿ ಓದಿನ ಬಗ್ಗೆ ಅನವಶ್ಯಕವಾಗಿ ಗೆಳೆಯರ ಜೊತೆ ಚರ್ಚೆ ಮಾಡುವುದು ಬೇಡ. ಪರೀಕ್ಷಾ ನಂತರವೂ ಬರೆದ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಮುಂದಿನ ವಿಷಯಕ್ಕೆ ತಯಾರಿ ಮಾಡಿಕೊಳ್ಳುವುದು ಒಳ್ಳೆಯದು ಎಂದು ಪರೀಕ್ಷೆ ಹಾಗೂ ಓದುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಅಂಕ ಗಳಿಸುವುದಷ್ಟೇ ಶಿಕ್ಷಣದ ಉದ್ದೇಶವಲ್ಲ:

ಪರೀಕ್ಷೆಗಾಗಿ ಓದುವುದು, ಅಂಕ ಗಳಿಸುವುದಷ್ಟೇ ಶಿಕ್ಷಣದ ಉದ್ದೇಶವಲ್ಲ. ನಾವು ಪರೀಕ್ಷೆಗಾಗಿ ಕಲಿತ ವಿದ್ಯೆ ಬಹಳಷ್ಟು ಕಾಲ ನಿಲ್ಲುವುದಿಲ್ಲ. ಹೃದಯಕ್ಕೆ ನಾಟಿದ ವಿಚಾರಗಳು ಬಹುಕಾಲ ನಿಲ್ಲುತ್ತವೆ. ಬಾಯಿಪಾಠ ಮಾಡಿಕೊಂಡು ಅರ್ಥ ಮಾಡಿಕೊಳ್ಳದೇ ಯಾವುದೇ ವಿಚಾರ ಕಲಿತರೂ ಅದು ಅಂಕಕ್ಕೆ ಸೀಮಿತವೇ ಹೊರತು ನಮಗೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ.ಕಳೆದು ಹೋದ ಸಮಯ ಬದುಕಲ್ಲಿ ಮತ್ತೆ ಬರುವುದಿಲ್ಲ. ಮಾಜಿ ರಾಷ್ಟ್ರಪತಿಗಳಾದ ಕೆ.ಆರ್.ನಾರಾಯಣನ್, ಅಬ್ದುಲ್ ಕಲಾಂ ಮೊದಲಾದ ಮಹನೀಯರ ಸಾಧನೆಗಳು ಸ್ಪೂರ್ತಿಯಾಗಬೇಕು ಎಂದರು.

ಕ್ಷೇತ್ರ ಶಿಕ್ಷಣಾಕಾರಿ ಸೈಯೀದಾ ಅನೀಸ್ ಮಾತನಾಡಿ, ಮಾ.21ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಯಾವುದೇ ಅಂಜಿಕೆಯಿಲ್ಲದೇ ಸಜ್ಜಾಗಬೇಕಾಗಿದೆ. ಈ ದಿಸೆಯಲ್ಲಿ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರ ಮಾತುಗಳು ಮಕ್ಕಳಿಗೆ ಸ್ಪೂರ್ತಿಯಾಗಲಿ ಎಂದು ಈ ಕಾರ್ಯಕ್ರಮ ಅಯೋಜಿಸಲಾಗಿದ್ದು, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಕರ್ಜಗಿಯವರ ಮಾತುಗಳು ಸದಾ ಸ್ಪೂರ್ತಿಯಾಗಲಿವೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಕಾರಿ ಮುನಿರಾಜು, ದೇವರಾಜ ಅರಸು ವಿದ್ಯಾಸಂಸ್ಥೆಯ ಎಇಇ ರಮೇಶ್ ಕುಮಾರ್, ಆರ್.ಎಲ್‍ಜೈಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಜೆ.ಆರ್.ರಾಕೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ತಾಲೂಕು ಅಧ್ಯಕ್ಷ ಶಿವಕುಮಾರ್, ಬ್ಲೂಮ್ಸ್ ಟೆಕ್ನೋ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಮುರಳಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ರಾಜಶೇಖರ್, ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಕಾರ್ಯದರ್ಶಿ ಆಂಜಿನಪ್ಪ, ಶಿಕ್ಷಣ ಸಂಯೋಜಕರಾದ ಜಯಶ್ರೀ, ಮೈಲಾರಪ್ಪ, ಅಶ್ವಿನಿ, ಭೀಮರಾಜ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!