ಚಿಕ್ಕಮಧುರೆ ಶನಿಮಹಾತ್ಮಸ್ವಾಮಿ ಬ್ರಹ್ಮರಥೋತ್ಸವ‌ ಸಂಪನ್ನ

ಕನಸವಾಡಿ(ದೊಡ್ಡಬಳ್ಳಾಪುರ): ತಾಲೂಕಿನ ಮಧುರೆ ಹೋಬಳಿಯಲ್ಲಿನ ಕನಸವಾಡಿಯ ಇತಿಹಾಸ ಪ್ರಸಿದ್ಧ ಶನಿಮಹಾತ್ಮ ಸನ್ನಿಧಿಯಲ್ಲಿ ಬ್ರಹ್ಮರಥೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು.

ಶನಿಮಹಾತ್ಮ ಸ್ವಾಮಿಯ ಉತ್ಸವ ಮೂರ್ತಿ ಹೊತ್ತ ರಥವನ್ನು ಜಯಘೋಷಣೆಗಳೊಂದಿಗೆ‌ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿ, ಸ್ವಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ಉತ್ಸವ ಮೂರ್ತಿ ಹೊತ್ತ ತೇರಿಗೆ ಭಕ್ತರು ಬಾಳೆಹಣ್ಣು ದವನ ಸಮರ್ಪಿಸಿ ಭಕ್ತಿ‌ ಮೆರೆದರು.

ಬ್ರಹ್ಮರಥೋತ್ಸವ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಗಿತ್ತು. ವಿವಿಧ ಜಿಲ್ಲೆಗಳು, ಅಕ್ಕಪಕ್ಕದ ತಾಲೂಕುಗಳಿಂದ  ಭಕ್ತ ಸಾಗರ ಹರಿದುಬಂದು ದೇವರ ದರ್ಶನ ಪಡೆದರು.

ಡೊಳ್ಳು ಕುಣಿತ, ಕೀಲುಕುದುರೆ ಕುಣಿತ, ಕಂಸಾಳೆ ನೃತ್ಯ ಪ್ರದರ್ಶನಗಳು ನೋಡುಗರ ಕಣ್ಮನ ಸೆಳೆದವು. ಭಕ್ತ ಗಣಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಮಧುರೆ ಶನಿಮಹಾತ್ಮದೇವಾಲಯ ಧಾರ್ಮಿಕ ಕ್ಷೇತ್ರವಾಗಿ ಪ್ರಖ್ಯಾತಿ ಪಡೆದಿದೆ. 80 ವರ್ಷಗಳ ಹಿಂದೆ ಸ್ಥಾಪಿತವಾದ ದೇವಸ್ಥಾನ ದಿನೇದಿನೆ ಅಭಿವೃದ್ಧಿಗೊಂಡು ಈಗ ಸುಸಜ್ಜಿತ ದೇಗುಲ ಹೊಂದಿದೆ. ಸುಂದರವಾದ ರಾಜಗೋಪುರ, ಕಲ್ಲು ಮಂಟಪದ ಆವರಣವಿರುವ ಗರ್ಭಗುಡಿಯಲ್ಲಿ ಮೂಲ ವಿಗ್ರಹದೊಂದಿಗೆ ಶನಿಮಹಾತ್ಮ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ದೇವಾಲಯ ಮುಂಭಾಗದ ಮಂಟಪದ ಉತ್ಸವ ಮೂರ್ತಿಗೆ ಪ್ರತಿದಿನ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ದೇಗುಲ ಆವರಣದಲ್ಲಿ ಗಣಪತಿ ದೇವಾಲಯವಿದೆ. ಇಲ್ಲಿ ಶನಿಮಹಾತ್ಮ ಹಾಗೂ ಜೇಷ್ಠಾದೇವಿ ದೇಗುಲಗಳು ಒಟ್ಟಾಗಿರುವುದು ತುಂಬ ಅಪರೂಪವಾಗಿದೆ.

Leave a Reply

Your email address will not be published. Required fields are marked *