ಕೋಲಾರ: ರಾಜ್ಯ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ 50 ಸಾವಿರ ಕೋಟಿ ಅನುದಾನದ ಜೊತೆಗೆ ವಿದರ್ಭ ಪ್ಯಾಕೇಜ್ ಘೋಷಣೆ ಮಾಡಿ ಕೆಸಿವ್ಯಾಲಿ 3ನೇ ಹಂತದ ಶುದ್ಧೀಕರಣ, ಎ.ಪಿ.ಎಂ.ಸಿ ಗೆ 100 ಎಕರೆ ಜಮೀನು ಹಾಗೂ ನಕಲಿ ಬಿತ್ತನೆ ಬೀಜ ಕೀಟ ನಾಶಕ ನಿಯಂತ್ರಣಕ್ಕೆ ಕಾನೂನು ಜಾರಿ ಮಾಡಬೇಕೆಂದು ರೈತಸಂಘದಿಂದ ಪಲ್ಲವಿ ವೃತ್ತದಲ್ಲಿ ಜಾನುವಾರುಗಳ ಸಮೇತ ಹೋರಾಟ ಮಾಡಿ ಕಂದಾಯ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯನ್ನು ಪ್ರತಿ ಸರ್ಕಾರ ಬಜೆಟ್ ನಲ್ಲಿ ನಿರ್ಲಕ್ಷ ಮಾಡುವ ಜೊತೆಗೆ ಸ್ಥಳೀಯರ ನಾಡಿಮಿಡಿತ ಇರುವ ಉಸ್ತುವಾರಿ ಸಚಿವರ ನೇಮಕ ಮಾಡಿ ಜನ ವಿರೋಧಿ ನೀತಿಯನ್ನು ಸರ್ಕಾರಗಳು ಅನುಸರಿಸುವ ಜೊತೆಗೆ ಸ್ಥಳಿಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಜನಪ್ರತಿನಿದಿಗಳು ವಿಪಲವಾದ್ದಾರೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ವೇಮಗಲ್ ಮಹಿಳಾ ಸಮಾವೇಶದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ನಂತರ ಸ್ತ್ರೀ ಶಕ್ತಿ ಸಹಕಾರ ಸಂಘಗಳ ಸಾಲ ಮನ್ನಾ ಮಾಡುವ ಮಾತನ್ನು ಬಜೆಟ್‌ನಲ್ಲಿ ಉಳಿಸಿಕೊಳ್ಳುವ ಜೊತೆಗೆ ಡಿ.ಸಿ.ಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟ ಉಳಿವಿಗಾಗಿ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದರು.
ಪ್ರತಿ ಬಜೆಟ್‌ನಲ್ಲಿಯೂ ಯಾವುದೇ ಅನುದಾನ ಬಿಡುಗಡೆಯಾಗುತ್ತಿಲ್ಲ. ಅಭಿವೃದ್ಧಿಯಾಗದ ಮಾರುಕಟ್ಟೆ ಜಾಗದ ಸಮಸ್ಯೆ ಕೆಸಿ ವ್ಯಾಲಿ ೩ನೇ ಹಂತದ ಶುದ್ಧೀಕರಣ, ಕೆರೆ ಒತ್ತುವರಿ ತೆರವು, ಸರ್ಕಾರಿ ಮೆಡಿಕಲ್ ಕಾಲೇಜು, ನಕಲಿ ಬಿತ್ತನೆ ಬೀಜಗಳ ಹಾವಳಿಗೆ ಕಾನೂನು ರಚನೆ ಮಾಡುವ ಮುಖಾಂತರ ಬಜೆಟ್‌ನಲ್ಲಿ ರೈತರ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಗಡಿಭಾಗದ ರೈತರ ನಿದ್ದೆಗೆಡಿಸುತ್ತಿರುವ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ, ಯರಗೋಳ್ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಕುಡಿಯಲು ಸರಬರಾಜು ಮಾಡಲು ಅನುದಾನ, ಕೃಷಿ ಆಧಾರಿತ ಕೃಗಾರಿಕೆಗಳು, ಮಾವು ಸಂಸ್ಕರಣಾ ಘಟಕಗಳಿಗೆ ಅನುದಾನ ಬಿಡುಗಡೆಗೆ ಒತ್ತಾಯ ಮಾಡಿದರು.
ಜಿಲ್ಲೆಯ ಅಭಿವೃದ್ದಿಗೆ ಬಜೆಟ್‌ನಲ್ಲಿ ೫೦ ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿ ಪಂಚಾಯಿತಿಗೊಂದು ಗೋಶಾಲೆ ತೆರೆಯಬೇಕು. ಎತ್ತಿನಹೊಳೆ ನೀರಾವರಿ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಜಿಲ್ಲೆಯ ಜನತೆಗೆ ಕುಡಿಯುವ ನೀರು ಒದಗಿಸಲು ಅನುದಾನ ನೀಡುವ ಜೊತೆಗೆ ಸ್ಥಳೀಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.೯೦ ರಷ್ಟು ಉದ್ಯೋಗ ನೀಡಲು ಕಾನೂನು ರಚನೆ ಮಾಡಿ ಬೇಸಿಗೆಯಲ್ಲಿ ವಿದ್ಯುತ್ ಅಡಚಣೆ ಆಗದಂತೆ ರೈತರ ರಕ್ಷಣೆ ಮಾಡಬೇಕೆಂದರು.
ಜಿಲ್ಲೆಯಲ್ಲಿ ಹದಗೆಟ್ಟಿರುವ ರಸ್ತೆಗಳಿಗೆ ಕೆರೆ, ರಾಜಕಾಲುವೆ, ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ ಕುಂಠಿತವಾಗಿರುವ ರಸ್ತೆ ಅಭಿವೃದ್ಧಿಗೆ ಕಾಯಕಲ್ಪ ಕಲ್ಪಿಸಬೇಕು. ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ನೀಡುವ ಹನಿ ನೀರಾವರಿ ಪದ್ಧತಿಯ ಸಬ್ಸಿಡಿಯನ್ನು ೩ ವರ್ಷಕ್ಕೊಮ್ಮೆ ನೀಡುವ ಜೊತೆಗೆ ಅಜೀವ ಅವೈಜ್ಞಾನಿಕ ಆದೇಶವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕಂದಾಯ ಅಧಿಕಾರಿಗಳು ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗವಾದಿ ನಾಗರಾಜ್‌ಗೌಡ, ಶಿವಾರೆಡ್ಡಿ, ಮರಗಲ್ ಶ್ರೀನಿವಾಸ್, ಸುಪ್ರೀಂ ಚಲ, ಯಲ್ಲಪ್ಪ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ ಚಂದ್ರಪ್ಪ , ವಕ್ಕಲೇರಿ ಹನುಮಯ್ಯ, ಹೆಬ್ಬಣಿ ಆನಂದ್‌ರೆಡ್ಡಿ, ತರ‍್ನಹಳ್ಳಿ ಆಂಜಿನಪ್ಪ, ಶೈಲಜ, ರಾಧಮ್ಮ, ರತ್ನಮ್ಮ, ಸುಗುಣ ಸೇರಿದಂತೆ ಇತರರು ಉಪಸ್ಥಿತರಿದ್ದರು.