
ಕೋಲಾರ: ಜಿಲ್ಲೆಯ ಅಂತರ್ಜಲ ಹೆಚ್ಚಳಕ್ಕೆ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆಯಡಿ ಹರಿಸುತ್ತಿರುವ ನೀರನ್ನು ಮೂರನೇ ಹಂತದ ಶುದ್ಧೀಕರಣ, ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಮತ್ತು ಇಂಜಿನಿಯರ್ ಕಾಲೇಜುಗಳ ಸ್ಥಾಪನೆಗೆ ಮುಂಬರಲಿರುವ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಅನುದಾನ ಮೀಸಲಿಡುವಂತೆ ಸರ್ಕಾರವನ್ನು ಜೆಡಿಎಸ್ ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಯಲುವಗುಳಿ ನಾಗರಾಜ್ ಒತ್ತಾಯಿಸಿದರು,
ಕೋಲಾರ ಜಿಲ್ಲೆಯಲ್ಲಿ ಯಾವುದೇ ನದಿ ನಾಲೆಗಳು ಇಲ್ಲದ ಜಿಲ್ಲೆಯಾಗಿದೆ ಶಾಶ್ವತವಾದ ನೀರಾವರಿ ಯೋಜನೆಗಳಿಂದ ವಂಚಿತವಾದ ಕಾರಣ ಇಲ್ಲಿನ ರೈತರು ಕುಡಿಯುವ ನೀರು ಮತ್ತು ಕೃಷಿ ಬಳಕೆಗಾಗಿ ಸುಮಾರು 1,500 ಅಡಿ ಆಳದ ಕೊಳವೆಬಾವಿ ಕೊರೆಸುವ ಅನಿವಾರ್ಯತೆಗೆ ಸಿಲುಕಿದ್ದರು ಇದರಿಂದ ಅಂತರ್ಜಲವು ಪಾತಾಳಕ್ಕೆ ಕುಸಿದಿತ್ತು ಹಿಂದೆ ಸಿದ್ದರಾಮಯ್ಯ ಸರ್ಕಾರವು ಕೆ.ಸಿ ವ್ಯಾಲಿ ಯೋಜನೆಯ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾರಿ ಮಾಡಿದ್ದ ಯೋಜನೆಗೆ ಮೂರನೇ ಹಂತದ ಶುದ್ದೀಕರಣ ಮಾಡಲು ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಕೋಲಾರ ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಸರಕಾರಿ ವೈದ್ಯಕೀಯ ಮತ್ತು ಇಂಜಿನಿಯರ್ ಕಾಲೇಜುಗಳು ಸ್ಥಾಪನೆ ಕೇವಲ ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆಗಷ್ಟೇ ಸೀಮಿತಗೊಂಡಿದೆ ಸರಕಾರಿ ಕಾಲೇಜುಗಳು ಆರಂಭಗೊಂಡರೆ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಾಗುತ್ತದೆ ಖಾಸಗಿ ಕಾಲೇಜುಗಳಲ್ಲಿನ ದುಬಾರಿ ಶುಲ್ಕ ಇರುವುದರಿಂದ ಜಿಲ್ಲೆಯ ಹಲವಾರು ಮಂದಿ ಪ್ರತಿಭಾನ್ವಿತ ಬಡಮಕ್ಕಳು ವೈದ್ಯಕೀಯ ಮತ್ತು ಇಂಜಿನಿಯರ್ ಶಿಕ್ಷಣದಿಂದಲೇ ವಂಚಿತವಾಗುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಗೆ ಕುಡಿಯುವ ನೀರಿಗಾಗಿ ಸುಮಾರು 16 ವರ್ಷಗಳ ಹಿಂದೆ ಪ್ರಾರಂಭವಾದ ಎತ್ತಿನಹೊಳೆ ಯೋಜನೆಯಿಂದ ನೀರು ಬರುವಂತೆ ಕ್ರಮ ವಹಿಸಬೇಕು ಕೋಲಾರ ನಗರದಲ್ಲಿನ ರಸ್ತೆಗಳ ವಿಸ್ತರಣೆ ಹಾಗೂ ರಿಂಗ್ ರಸ್ತೆಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡಬೇಕು ಜೊತೆಗೆ ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಶಾಸಕರೊಬ್ಬರನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಕ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಯಲುವಗುಳಿ ನಾಗರಾಜ್ ಒತ್ತಾಯಿಸಿದರು.