
ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಕಂಡು ಬರುತ್ತಿರುವ ಹಕ್ಕಿ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಕೋಳಿ ಸಾಕಾಣಿಕೆ ಮಾಲಿಕರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಕ್ತ ನಿರ್ದೇಶನ ನೀಡಿ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ. ಕೆ.ಎನ್ ಅನುರಾಧ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂಬಂಧ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 383 ರೈತರು ಸುಮಾರು 95 ಲಕ್ಷ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದು, ವಾಡಿಕೆಯ ಕಣ್ಗಾವಲು (ಪರಿಶೀಲನೆ) ಮಾಡಿದಾಗ ಯಾವುದೇ ಹಕ್ಕಿ ಜ್ವರದ ಪ್ರಕರಣಗಳು ಇದುವರೆಗೂ ಕಂಡುಬರುವುದಿಲ್ಲ. ಹಕ್ಕಿ ಜ್ವರ ಸೋಂಕು ತಗುಲಿದ ಹಕ್ಕಿಗಳ ರೆಕ್ಕೆಗಳು, ನೀರು, ಮೊಟ್ಟೆ, ಪಂಜರ ಮತ್ತು ಇತರೆ ಸಂಬಂಧಿಸಿದ ವಸ್ತುಗಳಿಂದ ಹರಡುತ್ತದೆ.

ಹಕ್ಕಿಗಳ ಚಟುವಟಿಕೆ ಮತ್ತು ಆಹಾರ ಸೇವನೆ ಕಡಿಮೆಯಾಗುವುದು ಉಸಿರು ಆಡುವಾಗ ಶಬ್ದ, ಚರ್ಮವು ನೀಲಿ ಬಣ್ಣಕ್ಕೆ ತಿರುಗುವುದು, ಅತೀ ಬೇಧಿ ಮತ್ತು ಹಕ್ಕಿಗಳು ಪೂರ್ವ ಚಿಹ್ನೆಗಳಿಲ್ಲದೆ ಸಾಯುವುದು ಪ್ರಮುಖ ಲಕ್ಷಣಗಳು. ಯಾವುದೇ ಪಕ್ಷಿಗಳು ಅಥವಾ ಕೋಳಿಗಳು ಅನುಮಾನಾಸ್ಪದವಾಗಿ, ಅಸಹಜವಾಗಿ ಇಲ್ಲವೇ ಇದ್ದಕ್ಕಿದ್ದಂತೆ ಸಾವುಗಳು ಕಂಡು ಬಂದಲ್ಲಿ ಹತ್ತಿರದ ಪಶು ಸಂಗೋಪನಾ ಇಲಾಖೆಗೆ ಮಾಹಿತಿಯನ್ನು ನೀಡಬೇಕು.
ಇದಕ್ಕಾಗಿ ಪ್ರತೀ ತಾಲ್ಲೂಕಿನಲ್ಲಿ ಆರ್.ಆರ್.ಟಿ (ಕ್ಷಿಪ್ರ ಪ್ರತಿಕ್ರಿಯೆ ತಂಡ) ರಚಿಸಿದ್ದು, ಜಿಲ್ಲೆಯಲ್ಲಿ ಒಟ್ಟು 39 ಆರ್.ಆರ್.ಟಿ ಯು ಸನ್ನದ್ಧವಾಗಿದೆ. ಪ್ರತಿ ತಂಡದಲ್ಲಿ ಒಬ್ಬ ಪಶು ವೈದ್ಯಾಧಿಕಾರಿ, ಅರೇ ತಾಂತ್ರಿಕ ಸಿಬ್ಬಂದಿ ಹಾಗೂ ಡಿ ದರ್ಜೆ ನೌಕರರು ಇರುತ್ತಾರೆ.
ಮುಖ್ಯವಾಗಿ ಕೋಳಿ ಫಾರ್ಮ್ ಗಳಿಗೆ ಹೊರಗಿನ ಪ್ರದೇಶದಿಂದ ಬರುವ ಜನರನ್ನು ಮತ್ತು ವಾಹನಗಳನ್ನು ತಾತ್ಕಾಲಿಕವಾಗಿ ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಜಗದೀಶ್, ಜಿಲ್ಲಾ ಆರೋಗ್ಯಾಧಿಕಾರಿ ಲಕ್ಕಾ ಕೃಷ್ಣ ರೆಡ್ಡಿ, ತಾಲ್ಲೂಕು ಪಶುವೈದ್ಯಾದಿಕಾರಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.