ಬಿಜೆಪಿ‌ಗೆ ಬಿಗ್ ಶಾಕ್..!: ಪಕ್ಷ ತೊರೆದ ನಗರ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ: ಓರ್ವ ಪಕ್ಷೇತರ, ಆರು ಮಂದಿ‌ ನಗರಸಭಾ ಸದಸ್ಯರು ಕಾಂಗ್ರೆಸ್ ಗೆ ಜಂಪ್

ದೊಡ್ಡಬಳ್ಳಾಪುರ: ತಾಲೂಕು ಬಿಜೆಪಿಯಲ್ಲಿ ಭಿನ್ನಮತ ಮತ್ತೆ ಸ್ಫೋಟಿಸಿದೆ. ಬಿಜೆಪಿ ಬೆಂಬಲಿತ ನಗರಸಭೆಯ ಐವರು ಸದಸ್ಯರು ಹಾಗೂ ಮುಖಂಡರು ಸೋಮವಾರ ಸಂಜೆ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಧೀರಜ್ ಮುನಿರಾಜು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜು ಹಾಗೂ ನಗರಾಧ್ಯಕ್ಷರಾದ ನಗರಸಭೆ ಸದಸ್ಯ ಎಚ್.ಎಸ್. ಶಿವಶಂಕರ್ ನೇತೃತ್ವದಲ್ಲಿ ಒಟ್ಟು ಆರು ಮಂದಿ ನಗರಸಭಾ ಸದಸ್ಯರು ಹಾಗೂ ಮುಖಂಡರು ಕಾಂಗ್ರೆಸ್ ಸೇರಿದರು.

ಟಿಕೆಟ್ ಘೋಷಣೆಯಾದ ಬಳಿಕ ಎಲ್ಲ ಮುಖಂಡರು ಭಿನ್ನಮತ ಮರೆತು ಒಂದಾಗಿದ್ದರು. ರಾಜಘಟ್ಟ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ್ದರು. ಧೀರಜ್ ಮುನಿರಾಜು ಅವರನ್ನು ಗೆಲ್ಲಿಸಿ ತರುವುದೇ ನಮ್ಮ ಮುಂದಿರುವ ಗುರಿ ಎಂದು ಹೇಳಿದ್ದರು. ಆದರೆ, ಹಠಾತ್ ಬೆಳವಣಿಗೆಯಲ್ಲಿ ಪಕ್ಷಾಂತರ ಮಾಡಿರುವುದು ಪಕ್ಷದಲ್ಲಿ ಸಂಚಲನ ಮೂಡಿಸಿದೆ.

ದೇವರಾಜನಗರ ವಾರ್ಡ್ ಸದಸ್ಯ ಎಚ್.ಎಸ್.ಶಿವಶಂಕರ್, ಕನಕದಾಸ ನಗರ ವಾರ್ಡ್ ಸದಸ್ಯ ಎಂ.ಶಿವ, ವೀರಭದ್ರಪಾಳ್ಯ ವಾರ್ಡಿನ ಆರ್. ಶಿವಣ್ಣ, ನಾಮನಿರ್ದೇಶಿತ ಸದಸ್ಯ ಶಿವು, ಸಿದ್ದೇನಾಯಕನಹಳ್ಳಿ ವಾರ್ಡ್ ಸದಸ್ಯೆ ವಿ. ಇಂದ್ರಾಣಿ ಅವರು ಕಾಂಗ್ರೆಸ್ ಸೇರ್ಪಡೆಯಾದ ನಗರಸಭಾ ಸದಸ್ಯರು.

ಉಳಿದಂತೆ ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜು, ಗುಂಡಮಗೆರೆಯ ಶಿವಾನಂದರೆಡ್ಡಿ, ವಿಶ್ವಾಸ್ ಗೌಡ, ಕೆ.ಟಿ.ಕೃಷ್ಣಪ್ಪ, ತ್ಯಾಗರಾಜ ನಗರ ವಾರ್ಡ್ ಪಕ್ಷೇತರ ಸದಸ್ಯ ಸುರೇಶ್(ಸುಬ್ಬು) ಸೇರ್ಪಡೆ.

Leave a Reply

Your email address will not be published. Required fields are marked *