ಕಲಬುರಗಿ ನಗರದ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆಯಾಗಿದೆ. ಭಾರತದಾದ್ಯಂತ ವಿವಿಧ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ದೆಹಲಿ ಮೂಲದ ಆರೋಪಿಯ ಬಂಧನ. ಸದ್ಯ ಬಂಧಿತನಿಂದ ಬರೋಬ್ಬರಿ 522 ನಕಲಿ ಅಂಕಪಟ್ಟಿಗಳು, 1626 ಖಾಲಿ ಅಂಕಪಟ್ಟಿಗಳು, 36 ಮೊಬೈಲ್, 2 ಲ್ಯಾಪ್ ಟಾಪ್, 1 ಪ್ರಿಂಟರ್, ವಿವಿಧ ವಿಶ್ವವಿದ್ಯಾಲಯಗಳ 122 ನಕಲಿ ಸೀಲ್ಗಳು, ಎಟಿಎಂ ಕಾರ್ಡ್ ಮತ್ತು ಆರೋಪಿಯ 123 ನಕಲಿ ಐಡಿಗಳು, ಆರೋಪಿಯ 85 ಬ್ಯಾಂಕ್ ಅಕೌಂಟ್ಗಳನ್ನು ಹಾಗೂ 1,20,000/- ನಗದು ಹಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಂತರ್ ರಾಜ್ಯ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್ ಡಿ ಅವರು ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದ್ದಾರೆ.
ದೆಹಲಿ ಮೂಲದ ರಾಜೀವ ಸಿಂಗ್ ಆರೋರಾ ಬಂಧಿತ ಆರೋಪಿ. ನವದೆಹಲಿಯ ರಾಮಪಾರ್ಕ್ ಅಪಾರ್ಟ್ಮೆಂಟ್ ದ್ವಾರಕ್ ಮೋಡ್ನಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿ ರಾಜೀವ ಸಿಂಗ್ ಆರೋರಾ ಕಳೆದ ಏಳೆಂಟು ವರ್ಷಗಳಿಂದ ನಕಲಿ ಅಂಕ ಪಟ್ಟಿ ತಯಾರಿ ಮಾಡುತ್ತಿದ್ದ. ಪಿಯುಸಿ, ಡಿಪ್ಲೋಮಾ ಇನ್ ಎಜುಕೇಶನ್, ಡಿಪ್ಲೋಮಾ ಆಫ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಡಾಕ್ಟರ್ ಆಫ್ ಫಿಲಾಸಫಿ, ಬಿ ಟೇಕ್ ಸೇರಿ ವಿವಿಧ ಕೋರ್ಸ್ಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.