ಭ್ರಷ್ಟಾಚಾರ ನಡೆದಿದ್ದರೆ ಅವತ್ತೇ ತನಿಖೆಗೆ ಒತ್ತಾಯಿಸಬೇಕಿತ್ತು- ವಡಗೂರು ಹರೀಶ್ ಗೆ ಈಗ ಜ್ಞಾನೋದಯವಾಯಿತೇ- ಸೀಸಂದ್ರ ಗೋಪಾಲಗೌಡ ಪ್ರಶ್ನೆ

ಕೋಲಾರ: ಕೋಚಿಮುಲ್ ನಲ್ಲಿ ಐದು ವರ್ಷ ನಿರ್ದೇಶಕನಾಗಿ ಅಧಿಕಾರ ಅನುಭವಿಸಿ ಈಗ ಭ್ರಷ್ಟಾಚಾರ ನಡೆದಿದೆ ಎನ್ನುವ ವಡಗೂರು ಹರೀಶ್ ಅವರಿಗೆ ನಾಚಿಕೆಯಾಗಬೇಕು. ಪ್ರತಿ ತಿಂಗಳ ಸಾಮಾನ್ಯ ಸಭೆಯಲ್ಲಿ ಜಮಾ ಖರ್ಚುಗಳ ಲೆಕ್ಕ ಕೊಟ್ಟಾಗ ಏಕೆ ಪ್ರಶ್ನೆ ಮಾಡಲಿಲ್ಲ? ಅವತ್ತು ಎಷ್ಟು ಸಭೆಗಳಿಗೆ ಡಿಸೆಂಟ್ ನೋಟ್ ಕೊಟ್ಟಿದ್ದೀರಿ ಈಗ ಜ್ಞಾನೋದಯವಾಗಿದೆಯೇ ಎಂದು ಕಾಂಗ್ರೆಸ್ ಮುಖಂಡ ಸೀಸಂಸ್ರ ಗೋಪಾಲಗೌಡ ಪ್ರಶ್ನಿಸಿದ್ದಾರೆ.

ಕೋಚಿಮುಲ್ ಅಕ್ರಮಗಳ ತನಿಖೆಗೆ ಆಗ್ರಹಿಸಿರುವ ವಡಗೂರು ಹರೀಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರವನ್ನು ಅನುಭವಿಸಿದ್ದಾಗ ಇಲ್ಲದ ಕಾಳಜಿ ಅಧಿಕಾರ ಹೋದ ಮೇಲೆ ಬಂದಂತಿದೆ. ಭ್ರಷ್ಟಾಚಾರ ನಡೆದಿದ್ದರೆ ಅವತ್ತೇ ತನಿಖೆಗೆ ಒತ್ತಾಯಿಸಬೇಕಿತ್ತು. ಕೋಚಿಮುಲ್ ನಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿ, ಅಭಿವೃದ್ಧಿ ವಿಚಾರಗಳಿಗೆ ವಡಗೂರು ಹರೀಶ್ ಇದ್ದ ಆಡಳಿತ ಮಂಡಳಿಯೇ ಅನುಮೋದನೆ ನೀಡಿದೆ. ತಾವೂ ಅದರಲ್ಲಿ ಭಾಗಿದಾರರು ಎಂಬುದನ್ನು ಮರೆಯಬಾರದು ಎಂದು ತಿರುಗೇಟು ನೀಡಿದ್ದಾರೆ.

ಹೊಳಲಿ ಹತ್ತಿರದ ರೈತರ ಜಮೀನುಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ತಾವೇ ನೇತೃತ್ವ ವಹಿಸಿದ್ದೀರಿ. ಅವತ್ತು ಅಲ್ಲಿ ನೆಡದ ಒತ್ತುವರಿ ತೆರವಿನ ಬಳಿಕ ಆ ಜಾಗದಲ್ಲಿ ಬೋರ್ ವೆಲ್ ಹಾಕಿಸಿದ ಗುತ್ತಿಗೆದಾರ ಯಾರು ಸ್ವಾಮಿ? ಅವತ್ತು ರೈತರ ಬೆಳೆಗಳನ್ನು ನೋಡದೇ ರೈತರನ್ನು ಒಕ್ಕಲೆಬ್ಬಿಸಿದ್ದು ಮರೆತು ಹೋಯಿತೇ? ಒಕ್ಕೂಟದಲ್ಲಿ ಸಣ್ಣಪುಟ್ಟ ಕಾಮಗಾರಿಗಳ ಟೆಂಡರ್ ನಲ್ಲಿ ತಾವು ಮತ್ತು ತಮ್ಮ ಪಟಾಲಮ್ ಪಾತ್ರವಿದೆ ಎಂಬುದನ್ನು ಮರೆತು ಈಗ ಸತ್ಯ ಹರಿಶ್ಚಂದ್ರನ ರೀತಿಯಲ್ಲಿ ಕಾಂಗ್ರೆಸ್ ಶಾಸಕರ ಬಗ್ಗೆ ಮಾತಾಡತ್ತೀಯಾ? ಕೋಲಾರ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲೇ ಬೇಕು ಎಂದು‌ ಹೊರಟವರು ನೀವು, ಇಷ್ಟಕ್ಕೂ ಕಾಂಗ್ರೆಸ್ ಶಾಸಕರ ಉಸಾಬುರಿ ತಮಗೆ ಏಕೆ ಸ್ವಾಮಿ? ಎಂದು ವಾಗ್ದಾಳಿ ನಡೆಸಿದರು.

ಡಿಸಿಸಿ ಬ್ಯಾಂಕ್ ನಲ್ಲಿ ಬಳಕೆದಾರರ ಸಂಘದಿಂದ ಬಂದಿರುವ ಮೂರ್ಖನ ಬಗ್ಗೆ ಹೇಳಿದ್ದೀಯಾ.
ಏಕೆ ನೇರವಾಗಿ ಅವರ ಹೆಸರು ಹೇಳಿಲ್ಲ? ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಇಲ್ಲದ ತನ್ನನ್ನು ರಾಜಕೀಯಕ್ಕೆ ಕರೆದುಕೊಂಡು ಬಂದು ಜಿಲ್ಲಾ ಪಂಚಾಯತಿ ಸದಸ್ಯ, ಉಪಾಧ್ಯಕ್ಷ, ರಾಜ್ಯ ಯೋಜನಾ ಮಂಡಳಿ ನಿರ್ದೇಶಕನಾಗಿ ಮಾಡಿದ್ದು ಅಲ್ಲದೇ ಕೋಚಿಮುಲ್ ನಿರ್ದೇಶಕನಾಗಿ ಮಾಡಿದ್ದು ಕೂಡ ಇದೇ ಮೂರ್ಖರು ಎನ್ನುವುದನ್ನು ಮರೆಯಬಾರದು ಎಂದಿದ್ದಾರೆ.

ಕೋಚಿಮುಲ್ ವಿಭಜನೆ ಇಲ್ಲದಾಗಲೇ ಕೋಲಾರ ತಾಲ್ಲೂಕನ್ನು ತಲಾ120 ಸಂಘಗಳು ಅಂತೆ ಉತ್ತರ ಮತ್ತು ದಕ್ಷಿಣ ಎಂದು ಎರಡು ಕ್ಷೇತ್ರ ಮಾಡಲಾಗಿತ್ತು ಕೋಮುಲ್ ಬೇರ್ಪಡಿಸಿದ ನಂತರ ಆಡಳಿತ ಮಂಡಳಿಯ ಒಟ್ಟು ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಕೋಲಾರ ಜಿಲ್ಲೆಯಲ್ಲಿ ಹೆಚ್ಚು ನಿರ್ದೇಶಕರು ಆಯ್ಕೆಯ ಮಾನದಂಡಗಳನ್ನು ಆಧರಿಸಿ ತಾಲೂಕಿನ ಒಟ್ಟು 240 ಸಂಘಗಳಿಂದ ತಲಾ 80 ಸಂಘಗಳನ್ನು ಸೇರಿಸಿ ಮೂರು ಕ್ಷೇತ್ರಗಳನ್ನು ಮಾಡಲಾಗಿದೆ ಅಷ್ಟ ಆದರೂ ಜ್ಞಾನವಿರಲಿ, ಕೋಲಾರ ತಾಲೂಕಿನಲ್ಲಿ ಮೂವರು ರೈತರ ಮಕ್ಕಳು ನಿರ್ದೇಶಕರು ಆಗುವುದು ತಮಗೆಲ್ಲಾ ಹೊಟ್ಟೆಹುರಿ ತರಿಸಿದೆ. ಇನ್ನು ತಾನು ಸಹಕಾರಿ ಕ್ಷೇತ್ರದಲ್ಲಿ ಅಂಬೆಗಾಲು ಇಡುತ್ತಿದ್ದೀಯಾ ಎನ್ನುವುದು ಮರೆಯಬೇಡ. ಮಾತಾಡುವ ಮೊದಲು ತಾನು ನಡೆದುಬಂದ ದಾರಿ ಮರೆಯಬಾರದು. ತಾನೊಬ್ಬನೇ ಬುದ್ಧಿವಂತ ಎಂದು ತನಗೆ ತಾನೇ ತಿಳಿದುಕೊಳ್ಳಬೇಡ. ಒಬ್ಬರಿಗಿಂತ ಒಬ್ಬ ಬುದ್ಧಿವಂತರು, ಸಹಕಾರಿಗಳು ಜಿಲ್ಲೆಯಲ್ಲಿ ಇದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *