ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರಲು, ವಿಜ್ಞಾನ ಮತ್ತು ಗಣಿತದ ಬಗ್ಗೆ ಇನ್ನಷ್ಟು ಅರಿವು ಮೂಡಿಸಲು, ಪ್ರಾಯೋಗಿಕ ಜ್ಞಾನ ವೃದ್ಧಿಸಲು ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಎಸ್ ಎಲ್ ಆರ್ ಎಸ್ ಶಾಲೆಯ ಕಾರ್ಯದರ್ಶಿ ಎಸ್.ಆರ್.ರಮೇಶ್ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯ ಎಸ್.ಎಲ್.ಆರ್.ಎಸ್ ಶಾಲೆಯಲ್ಲಿ ಆಯೋಜನೆ ಮಾಡಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸುತ್ತಾಮುತ್ತಾ ಸಿಗುವ ವಸ್ತುಗಳನ್ನು ಬಳಸಿಕೊಂಡು ಸ್ವತಃ ಮಕ್ಕಳೆ ವಿಜ್ಞಾನ ಹಾಗೂ ಗಣಿತಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಸಾವಯವ ಕೃಷಿ ಪ್ರಾಯೋಗಿಕತೆ, ರಾಕೆಟ್ ಉಡಾವಣೆ, ಮಳೆ ನೀರು ಕೊಯ್ಲು, ಹೃದಯ, ರಕ್ತ ಪರಿಚಲನೆ, ಬಿಪಿ, ರಕ್ತ ಪರೀಕ್ಷೆ ಸೇರಿದಂತೆ ಎಲ್ಲವನ್ನು ಮಕ್ಕಳೇ ಮಾಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಮಕ್ಕಳು ಈ ಪ್ರತಿಭೆಯನ್ನು ಇನ್ನು ಮುಂದೆ ನಮ್ಮ ಶಾಲೆಯಲ್ಲಿ ಮಾತ್ರವಲ್ಲದೇ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಬೇಕು. ಇದಕ್ಕೆ ಶಾಲಾ ಆಡಳಿತ ಮಂಡಳಿ ಸಹಕಾರ, ಪ್ರೋತ್ಸಾಹ ನೀಡಲಾಗುವುದು ಎಂದರು.
ವಸ್ತುಪ್ರದರ್ಶನದಲ್ಲಿ ರಾಷ್ಟ್ರೀಯ ಲಾಂಛನ, ಮಳೆ ನೀರು ಕೊಯ್ಲು, ವಿವಿಧ ರೀತಿಯ ಮನೆಗಳ ಕಲಾಕೃತಿ, ಮನುಷ್ಯನ ದೇಹ, ಮೆದುಳು, ಹೃದಯ, ಕಣ್ಣು, ವಿವಿಧ ಜೀವಿಗಳ ಕಲಾಕೃತಿಗಳು, ಸೋಲಾರ್ ಪ್ಯಾನಲ್, ಕಲಾ ಮತ್ತು ವಿಜ್ಞಾನ ಮಾದರಿಗಳು ಸೇರಿದಂತೆ ವಿವಿಧ ಪ್ರಯೋಗಗಳ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷೆ ಹರಿತಾ ರಮೇಶ್, ಶಾಲೆಯ ಸದಸ್ಯ ರಾಹುಲ್, ಮುಖ್ಯ ಶಿಕ್ಷಕ ಎನ್.ಎನ್.ನಾಗರಾಜ್ ಹಾಗೂ ಶಾಲೆಯ ಸಿಬ್ಬಂದಿ ಹಾಜರಿದ್ದರು.